ಚೆನ್ನೈ: ಭಗವಾನ್ ಶ್ರೀರಾಮನ ಅಸ್ತಿತ್ವ ಸಾಬೀತುಪಡಿಸುವುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ತಮಿಳುನಾಡು ಸಾರಿಗೆ ಸಚಿವ ಎಸ್.ಎಸ್.ಶಿವಶಂಕರ್ ಶುಕ್ರವಾರ ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ.
‘ಚೋಳರು ನಿರ್ಮಿಸಿದ ಅನೇಕ ಪ್ರಾಚೀನ ಕಟ್ಟಡಗಳು ನಮಗೆ ಸಿಗುತ್ತವೆ. ಇವು ಚೋಳ ರಾಜಮನೆತನದ ಅಸ್ತಿತ್ವ ಸಾರುತ್ತವೆ. ಇಂತಹ ಪುರಾವೆಗಳು ಶ್ರೀರಾಮನ ಕುರಿತು ಇಲ್ಲ’ ಎಂದು ಸಚಿವ ಶಿವಶಂಕರ್ ಹೇಳಿದ್ದಾರೆ.
ಅರಿಯಲೂರು ಜಿಲ್ಲೆಯ ಗಂಗೈಕೊಂಡಚೋಳಾಪುರಂನಲ್ಲಿ ಹಮ್ಮಿಕೊಂಡಿದ್ದ ರಾಜೇಂದ್ರ ಚೋಳ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಮಿಳರ ಇತಿಹಾಸವನ್ನು ಮರೆಮಾಚಿ, ತಮ್ಮ (ಉತ್ತರ ಭಾರತದವರು) ಇತಿಹಾಸವನ್ನು ನಮ್ಮ ಮೇಲೆ ಹೇರುವ ವ್ಯವಸ್ಥಿತ ಕಾರ್ಯತಂತ್ರ ನಡೆಯುತ್ತಿದ್ದು, ರಾಜ್ಯದ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.
‘ನನಗೂ ಮುಂಚೆ ಮಾತನಾಡಿದ ಅರಿಯಲೂರು ಶಾಸಕ, ಅಯೋಧ್ಯೆಯಲ್ಲಿನ ರಾಮ ಮಂದಿರಕ್ಕೆ 3 ಸಾವಿರ ವರ್ಷಗಳ ಇತಿಹಾಸ ಇದೆ ಎಂದು ಹೇಳಿದರು. ಅದು ಸತ್ಯವಲ್ಲ. ಈ ಬಗ್ಗೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ’ ಎಂದಿದ್ದಾರೆ.
‘ರಾಮಾಯಣ, ಮಹಾಭಾರತದಂತಹ ಗ್ರಂಥಗಳಲ್ಲಿ ಬದುಕಿಗೆ ಬೇಕಾದ ಸಂದೇಶಗಳಿಲ್ಲ. 2 ಸಾವಿರ ವರ್ಷಗಳ ಹಿಂದೆ ಸಂತ ಕವಿ ತಿರುವಳ್ಳುವರ್ ಬರೆದಿರುವ ‘ತಿರುಕ್ಕುರಳ್’ನಲ್ಲಿ ಜನರಿಗೆ ದಾರಿ ತೋರುವಂತಹ ರಚನೆಗಳಿವೆ’ ಎಂದೂ ಹೇಳಿದ್ದಾರೆ.