ನೌಶೆರಾ(ಜಮ್ಮು ಮತ್ತು ಕಾಶ್ಮೀರ): ‘ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರನ್ನು, ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡುವುದಿಲ್ಲ. ಭಯೋತ್ಪಾದನೆಯನ್ನು ಮುಟ್ಟುಗೋಲು ಹಾಕುವ ತನಕ ಪಾಕಿಸ್ತಾನದ ಜೊತೆ ಯಾವುದೇ ಮಾತುಕತೆ ಇಲ್ಲ’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ರೈನಾ ಅವರ ಪರ ನೌಶೆರಾದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಪಾಕಿಸ್ತಾನದೊಂದಿಗೆ ಅಲ್ಲ ಕಾಶ್ಮೀರದ ಯುವಕರೊಂದಿಗೆ ಮಾತನಾಡಲು ಬಯಸುತ್ತೇನೆ’ ಎಂದರು. .
‘ಅಧಿಕಾರಕ್ಕೆ ಬಂದರೆ ಕಲ್ಲು ತೂರಾಟಗಾರರು ಮತ್ತು ಭಯೋತ್ಪಾದಕರನ್ನು ಬಿಡುಗಡೆ ಮಾಡುವುದಾಗಿ ಅವರು(ಎನ್‌ಸಿ–ಕಾಂಗ್ರೆಸ್ ಮೈತ್ರಿ) ಭರವಸೆ ನೀಡುತ್ತಾರೆ. ಮೋದಿ ಸರ್ಕಾರ ಭಯೋತ್ಪಾದನೆಯನ್ನು ಪಾತಾಳದಲ್ಲಿ ಸಮಾಧಿ ಮಾಡಿದೆ ಎಂಬುದು ಅವರಿಗೆ ತಿಳಿದಿರಲಿ. ಯಾವುದೇ ಭಯೋತ್ಪಾದಕ ಅಥವಾ ಕಲ್ಲು ತೂರಾಟಗಾರರನ್ನು ಬಿಡುಗಡೆ ಮಾಡುವುದಿಲ್ಲ’ ಎಂದರು.
‘ಭಯೋತ್ಪಾದನೆ ನಿರ್ಮೂಲನೆ ಮಾಡುವವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ನಾನು ಫಾರೂಕ್ ಅಬ್ದುಲ್ಲಾ ಮತ್ತು ರಾಹುಲ್ ಗಾಂಧಿಗೆ ಹೇಳಲು ಬಯಸುತ್ತೇನೆ. ನಾನು ನನ್ನ ಸಿಂಹಗಳೊಂದಿಗೆ (ಜಮ್ಮು ಮತ್ತು ಕಾಶ್ಮೀರ ಯುವಕರು) ಮಾತನಾಡುತ್ತೇನೆ ಹೊರತು ಪಾಕಿಸ್ತಾನದೊಂದಿಗೆ ಅಲ್ಲ’ ಎಂದು ಹೇಳಿದರು.
‘ಮೀಸಲಾತಿ ಅಗತ್ಯವಿಲ್ಲ ಎಂದು ರಾಹುಲ್ ಗಾಂಧಿ ಅಮೆರಿಕದಲ್ಲಿ ಹೇಳುತ್ತಿದ್ದಾರೆ. ಅರ್ಹ ಸಮುದಾಯಗಳಿಗೆ ಮೀಸಲಾತಿಯನ್ನು ಮುಗಿಸಲು ನಿಮಗೆ(ರಾಹುಲ್) ಅವಕಾಶ ನೀಡುವುದಿಲ್ಲ’ ಎಂದರು.