ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ತಾಯಿಗೆ ಐ.ಟಿ ನೋಟಿಸ್‌ ಜಾರಿ

ಬೇನಾಮಿ ಆಸ್ತಿ ಕುರಿತು ಪುನಃ ವಿವರಣೆ ಕೇಳಿದ ಐ.ಟಿ
Last Updated 5 ಮಾರ್ಚ್ 2019, 19:15 IST
ಅಕ್ಷರ ಗಾತ್ರ

ಬೆಂಗಳೂರು: ಬೇನಾಮಿ ಆಸ್ತಿ ಪ್ರಕರಣದಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರ ತಾಯಿ ಗೌರಮ್ಮ ಅವರಿಗೆ ಆದಾಯ ತೆರಿಗೆ ಇಲಾಖೆ (ಐ.ಟಿ) ಪುನಃ ನೋಟಿಸ್‌ ಜಾರಿ ಮಾಡಿ ವಿವರಣೆ ಕೇಳಿದೆ.

ಇತ್ತೀಚೆಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಬುಧವಾರದ (ಮಾರ್ಚ್‌ 6)ಒಳಗಾಗಿ ತಾನು ಎತ್ತಿರುವ ಆಕ್ಷೇಪಗಳಿಗೆ ಸೂಕ್ತ ವಿವರಣೆ ನೀಡದಿದ್ದರೆ ಬೇನಾಮಿ ಆಸ್ತಿ ಜಪ್ತಿ ಮಾಡುವುದಾಗಿ ತಿಳಿಸಲಾಗಿದೆ. ಇದರಿಂದಾಗಿ ಶಿವಕುಮಾರ್‌ ಇನ್ನಷ್ಟು ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ.

ಸಚಿವರು ಮತ್ತು ಅವರ ಕುಟುಂಬದ ಸದಸ್ಯರು ಹೊಂದಿದ್ದಾರೆ ಎನ್ನಲಾದ ಬೇನಾಮಿ ಆಸ್ತಿ ಕುರಿತು ತನಿಖೆ ಕೈಗೊಂಡಿರುವ ಐ.ಟಿ ಇಲಾಖೆ, ಸಚಿವರಪತ್ನಿ ಉಷಾ, ಪುತ್ರಿ ಐಶ್ವರ್ಯಾ ಮತ್ತು ಸೋದರ ಡಿ.ಕೆ. ಸುರೇಶ್‌ ಅವರಿಗೆ ಐ.ಟಿ ಇದುವರೆಗೆ ಸಾಕಷ್ಟು ನೋಟಿಸ್‌ಗಳನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.

ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಲುಆದಾಯ ತೆರಿಗೆ ಇಲಾಖೆ (ಐ.ಟಿ) ಜನವರಿಯಲ್ಲೇ ಕಾನೂನು ಪ್ರಕ್ರಿಯೆ ಆರಂಭಿಸಿದೆ. ಈ ಬಗ್ಗೆಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಜನವರಿ ಮೊದಲ ವಾರ ಗೌರಮ್ಮ ಅವರನ್ನು ಐ.ಟಿ ಅಧಿಕಾರಿಗಳು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು.

ಶಿವಕುಮಾರ್‌ ಎಷ್ಟು ಮೌಲ್ಯದ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಮೂಲಗಳು ನಿರಾಕರಿಸಿವೆ. ಆದರೆ, ಅವರು ಬೇನಾಮಿ ಜಮೀನು ಹೊಂದಿರುವುದು ತನಿಖೆಯಿಂದ ದೃಢ‍ಪಟ್ಟಿದೆ ಎಂದು ಖಚಿತಪಡಿಸಿವೆ.

ಇದಲ್ಲದೆ, 2018ರ ವಿಧಾನಸಭೆ ಚುನಾವಣೆ ಸಮಯದಲ್ಲಿಶಿವಕುಮಾರ್‌ ತಮ್ಮ ಆಸ್ತಿಪಾಸ್ತಿಗೆ ಸಂಬಂಧಿಸಿದಂತೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಐ.ಟಿ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಶಿವಕುಮಾರ್‌ 2015–16ರಿಂದ 2017– 18ರವರೆಗೆ ಸರಿಯಾದ ಆಸ್ತಿ ವಿವರ ಸಲ್ಲಿಸದೇ ತೆರಿಗೆ ವಂಚಿಸಿದ್ದಾರೆ ಹಾಗೂ ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ನಾಶಪಡಿಸಿದ್ದಾರೆ ಎಂಬ ಆರೋಪದಿಂದ ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ ಮುಕ್ತಗೊಳಿಸಿದೆ.

ಸಚಿವರು ಹೊಂದಿರುವ ಅಘೋಷಿತ ಆಸ್ತಿ ಕುರಿತು ಅಂದಾಜು ಮಾಡಿದ ಬಳಿಕ ಮತ್ತು ಶೋಧ ಕಾರ್ಯದಲ್ಲಿ ಭಾಗವಹಿಸಿದ್ದ ಅಧಿಕಾರಿ ಬಳಿ ಲಭ್ಯವಿರುವ ಪುರಾವೆ ಆಧರಿಸಿ ಹೊಸದಾಗಿ ಪ್ರಕರಣ ದಾಖಲಿಸುವ ಸ್ವಾತಂತ್ರ್ಯವನ್ನು ಐ.ಟಿ ಇಲಾಖೆಗೆ ಬಿಡಲಾಗಿದೆ.

ಪ್ರಕರಣದ ಹಿನ್ನೆಲೆ: ಆದಾಯ ತೆರಿಗೆ ಇಲಾಖೆ ಶಿವಕುಮಾರ್‌, ಅವರ ಆಪ್ತರ ಮನೆಗಳು, ಬಿಡದಿ ಸಮೀಪದ ಈಗಲ್‌ಟನ್‌ ರೆಸಾರ್ಟ್‌ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಆಸ್ತಿಪಾಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದಿದ್ದ ಚುನಾವಣೆ ಸಮಯದಲ್ಲಿ ‘ಶಾಸಕರ ಖರೀದಿ’ ತಪ್ಪಿಸಲು ಕಾಂಗ್ರೆಸ್‌ ಶಾಸಕರನ್ನು ಅಹಮದಾಬಾದ್‌ನಿಂದ ಬೆಂಗಳೂರಿಗೆ ಕರೆತಂದು ಶಿವಕುಮಾರ್ ಆಶ್ರಯ ನೀಡಿದ್ದರು. ಅದೇ ಸಮಯದಲ್ಲಿ ಐ.ಟಿ ದಾಳಿ ನಡೆದಿತ್ತು.

ಇ.ಡಿ ಬಳಿ ಸಮಯ ಕೇಳಿದ ಸಚಿವರು

ಲೇವಾದೇವಿ ತಡೆ ಕಾಯ್ದೆ ಅಡಿ ಶಿವಕುಮಾರ್‌ ಹಾಗೂ ಅವರ ಆಪ್ತರ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಮುಂದೆ ಸಚಿವರು ಇಂದು ಹಾಜರಾಗಬೇಕಿತ್ತು. ಆದರೆ, ಕಾಲಾವಕಾಶ ನೀಡುವಂತೆ ಅವರು ಕೇಳಿದ್ದಾರೆ.

ದೆಹಲಿಯ ಸಫ್ದರ್‌ಜಂಗ್‌ ಎನ್‌ಕ್ಲೇವ್‌ ಸೇರಿದಂತೆ ವಿವಿಧೆಡೆ ₹ 8.6 ಕೋಟಿ ಅಕ್ರಮ ಹಣ ವಶಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಪ್ರಕರಣದಲ್ಲಿ ಇ.ಡಿ ಸಮನ್ಸ್‌ ರದ್ದುಪಡಿಸುವಂತೆ ಕೋರಿ ಸಚಿವರು ಸಲ್ಲಿಸಿರುವ ಅರ್ಜಿ ಇದೇ ಗುರುವಾರ ವಿಚಾರಣೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT