ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್‌, ನೆಟ್‌ ಅಕ್ರಮ | ಎನ್‌ಟಿಎ ಮುಖ್ಯಸ್ಥರ ಮೇಲೂ ನಿಗಾ: ಧರ್ಮೇಂದ್ರ ಪ್ರಧಾನ್‌

Published 22 ಜೂನ್ 2024, 16:25 IST
Last Updated 22 ಜೂನ್ 2024, 16:25 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಯುಜಿ–ನೀಟ್‌’ ಮತ್ತು ‘ಯುಜಿಸಿ–ನೆಟ್‌’ ಪರೀಕ್ಷಾ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಮುಖ್ಯಸ್ಥರ  ಮೇಲೂ ನಿಗಾ ಇರಿಸಲಾಗಿದೆ ಎಂದು ಶನಿವಾರ ತಿಳಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌, ‘‌ಸಿಎಸ್‌ಐಆರ್‌–ಯುಜಿಸಿ–ನೆಟ್‌’ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಅಲ್ಲಗಳೆದರು.

‘ವಿದ್ಯಾರ್ಥಿಗಳ ಹಿತಾಸಕ್ತಿಯ ಪಾಲಕರಾದ ನಾವು ಯಾವುದೇ ಕ್ರಮ ತೆಗೆದುಕೊಳ್ಳುವ ಮುನ್ನ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳಬೇಕು’ ಎಂದು ಸಚಿವರು ತಿಳಿಸಿದರು.

ನೀಟ್‌ ಪರೀಕ್ಷೆಯನ್ನು ಸರಿಯಾಗಿ ಬರೆದು ಉತ್ತೀರ್ಣರಾಗಿರುವ ಲಕ್ಷಾಂತರ ಅಭ್ಯರ್ಥಿಗಳ ವೃತ್ತಿಜೀವನಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಪ್ರಧಾನ್‌ ಇತ್ತೀಚೆಗೆ ಹೇಳಿದ್ದರು.

‘ಕೌನ್ಸಿಲ್‌ ಆಫ್‌ ಸೈಂಟಿಫಿಕ್‌ ಅಂಡ್‌ ಇಂಡಸ್ಟ್ರಿಯಲ್‌ ರಿಸರ್ಚ್‌– ಯುಜಿಸಿ- ನೆಟ್‌’ (CSIR-UGC-NET) ಪರೀಕ್ಷೆಯ ಜೂನ್‌ ಆವೃತ್ತಿಯನ್ನು ಎನ್‌ಟಿಎ ಶುಕ್ರವಾರ ರಾತ್ರಿ ದಿಢೀರನೇ ಮುಂದೂಡಿದೆ. ವಿಜ್ಞಾನ ವಿಷಯಗಳಲ್ಲಿ ಕಿರಿಯ ಸಂಶೋಧನಾ ಫೆಲೊ, ಸಹಾಯಕ ಪ್ರಾಧ್ಯಾಪಕರು ಮತ್ತು ಪಿಎಚ್‌.ಡಿ ಕೋರ್ಸ್‌ ಪ್ರವೇಶಕ್ಕಾಗಿನ ಅರ್ಹತೆಗಾಗಿ ಈ ಪರೀಕ್ಷೆ ನಡೆಸಲಾಗುತ್ತದೆ.

‘ಸಿಎಸ್‌ಐಆರ್‌–ಯುಜಿಸಿ–ಎನ್‌ಇಟಿ’ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಲಾಜಿಸ್ಟಿಕ್‌ ಸಮಸ್ಯೆಗಳ ಕಾರಣ ಅದನ್ನು ಮುಂದೂಡಲಾಗಿದೆ. ಅಲ್ಲದೆ ಜೂನ್‌ 23ರಂದು (ಭಾನುವಾರ) 1,563 ಅಭ್ಯರ್ಥಿಗಳಿಗೆ ‘ನೀಟ್‌’ ಮರು ಪರೀಕ್ಷೆಯೂ ಜರುಗಲಿದೆ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಸಿಎಸ್‌ಐಆರ್‌–ಯುಜಿಸಿ–ಎನ್‌ಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಪ್ರಧಾನ್‌ ಸುದ್ದಿಗಾರರಿಗೆ ಮಾಹಿತಿ ನೀಡಿದರು. 

‘ಸಾಂಸ್ಥಿಕ ವೈಫಲ್ಯವಾಗಿದೆ’:

ಪರೀಕ್ಷಾ ಅಕ್ರಮಗಳಲ್ಲಿನ ಎನ್‌ಟಿಎ ಪಾತ್ರ ಮತ್ತು ಅದರ ವಿರುದ್ಧದ ತನಿಖೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಷಯದಲ್ಲಿ ಸಾಂಸ್ಥಿಕ ವೈಫಲ್ಯವಾಗಿದೆ ಎಂಬುದನ್ನು ನಾನು ಈಗಾಗಲೇ ಒಪ್ಪಿಕೊಂಡಿದ್ದೇನೆ. ಸ್ವತಃ ನಾನೂ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇನೆ. ಈ ಕುರಿತು ಎನ್‌ಟಿಎ ಉನ್ನತ ನಾಯಕತ್ವವು ಹಲವು ಪ್ರಶ್ನೆಗಳನ್ನು ಎದುರಿಸುತ್ತಿದ್ದು, ನಿಗಾದಲ್ಲಿದೆ’ ಎಂದರು.

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕದಿಂದ ಶಿಕ್ಷಣ ಸಚಿವಾಲಯ ಕೇಳಿರುವ ವರದಿ ಕುರಿತ ಪ್ರಶ್ನೆಗೆ, ‘ಆ ವರದಿ ಇನ್ನೂ ಬಂದಿಲ್ಲ. ಆದರೆ ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರೂ ಬಿಡುವುದಿಲ್ಲ’ ಎಂದು ಉತ್ತರಿಸಿದರು.

ಗುಜರಾತ್‌ನ ಗೋಧ್ರಾದಲ್ಲಿನ ‘ನೀಟ್‌’ ಪರೀಕ್ಷಾ ಅಕ್ರಮಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಗೋಧ್ರಾದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಅಲ್ಲಿ ಸಂಘಟಿತ ವಂಚನೆ ನಡೆದಿದೆ. ಈ ಕಾರಣಕ್ಕಾಗಿ 30 ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಲಾಗಿದೆ. ಅಂತೆಯೇ ದೇಶದಾದ್ಯಂತ ಅನ್ಯಾಯದ ವಿಧಾನದ ಮೂಲಕ ಪರೀಕ್ಷೆ ಬರೆಯಲು ಯತ್ನಿಸಿದ 63 ವಿದ್ಯಾರ್ಥಿಗಳನ್ನೂ ಡಿಬಾರ್‌ ಮಾಡಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT