ಭುವನೇಶ್ವರ: ಒಡಿಶಾ ಸರ್ಕಾರವು 78ನೇ ಸ್ವಾತಂತ್ರ್ಯೋತ್ಸವದ ದಿನ ಮಹಿಳೆಯರಿಗೆ ವೇತನ ಸಹಿತ (ಪಿಎಂಎಲ್) ಮುಟ್ಟಿನ ರಜೆಯನ್ನು ಘೋಷಿಸಿದೆ.
‘ಈ ರಜೆಯನ್ನು ಮುಟ್ಟಿನ ಮೊದಲ ಅಥವಾ ಎರಡನೇ ದಿನದಂದು ತೆಗೆದುಕೊಳ್ಳಬಹುದು. ಈ ರಜೆಯು ಸಂಪೂರ್ಣ ಐಚ್ಛಿಕವಾಗಿರಲಿದೆ. ಮಹಿಳೆಯರು ಈ ರಜೆಯನ್ನು ತೆಗೆದುಕೊಳ್ಳದೆಯೂ ಇರಬಹುದು’ ಎಂದು ಕಠಕ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಉಪ ಮುಖ್ಯಮಂತ್ರಿ ಪ್ರವ್ತಿ ಪರಿದಾ ಅವರು ಹೇಳಿದರು. ಪ್ರವ್ತಿ ಅವರು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯೂ ಆಗಿದ್ದಾರೆ.
ಕೀನ್ಯಾದಲ್ಲಿ ವಿಶ್ವ ಸಂಸ್ಥೆಯ ‘ಸಿವಿಲ್ ಸೊಸೈಟಿ ಕಾನ್ಫರೆನ್ಸ್ 2024’ರಲ್ಲಿ ಭಾಗವಹಿಸಿದ್ದ ಒಡಿಶಾದ ಬಾಲಕಿಯೊಬ್ಬಳು, ವೇತನ ಸಹಿತ ಮುಟ್ಟಿನ ರಜೆ ನೀಡಬೇಕು ಎಂಬುದರ ಕುರಿತು ಮಾತನಾಡಿದ್ದಳು. ಮಹಿಳಾಪರ ಹೋರಾಟಗಾರ್ತಿ ಒಡಿಶಾದ ರಂಜಿತಾ ಪ್ರಿಯದರ್ಶಿನಿ ಅವರು ಕೂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದರು.