ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ ರೈಲು ದುರಂತ: ಅಪಘಾತ ಸ್ಥಳದ ಲೈವ್‌ ಲೊಕೇಶನ್ ಕಳುಹಿಸಿದ್ದ ಯೋಧ

Published 4 ಜೂನ್ 2023, 6:37 IST
Last Updated 4 ಜೂನ್ 2023, 6:37 IST
ಅಕ್ಷರ ಗಾತ್ರ

ಭುವನೇಶ್ವರ/ನವದೆಹಲಿ: ಒಡಿಶಾದಲ್ಲಿ ನಡೆದ ತ್ರಿವಳಿ ರೈಲು ಅಪಘಾತದಲ್ಲಿ 288 ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ದುರಂತ ಸಂಭವಿಸಿದ ತಕ್ಷಣವೇ ಕೋರಮಂಡಲ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎನ್‌ಡಿಆರ್‌ಎಫ್‌ ಯೋಧರೊಬ್ಬರು ಅಧಿಕಾರಿಗಳಿಗೆ ‘ಲೈವ್‌ ಲೊಕೇಶ್‌ನ್‌‘ ಕಳುಹಿಸುವ ಮೂಲಕ ರಕ್ಷಣಾ ತಂಡ ವೇಗವಾಗಿ ಸ್ಥಳಕ್ಕೆ ತಲುಪಲು ಸಹಾಯ ಮಾಡಿದ್ದರು ಎಂದು ತಿಳಿದುಬಂದಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಯೋಧ ವೆಂಕಟೇಶ್ ಎನ್‌. ಕೆ. ಅವರು ರಜೆಯ ಮೇಲೆ ತಮ್ಮ ಊರು ತಮಿಳುನಾಡಿಗೆ ಹೊರಟಿದ್ದರು. ಪಶ್ಚಿಮ ಬಂಗಾಳದ ಹೌರಾದಲ್ಲಿ ರೈಲು ಹಿಡಿದು ತಮಿಳುನಾಡಿಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ವೆಂಕಟೇಶ್‌ ಅವರಿದ್ದ ಕೋಚ್‌ ಬಿ–7 (ಸೀಟ್‌ ನಂಬರ್‌ 58) ಅಪಘಾತದಿಂದ ಕೂದಲೆಳೆಯಿಂದ ಪಾರಾಗಿತ್ತು.

ಅಪಘಾತದ ಬಗ್ಗೆ ತಿಳಿಯುತ್ತಿದ್ದಂತೆ ವೆಂಕಟೇಶ್‌, ತಮ್ಮ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅಪಘಾತದ ಸ್ಥಳದ ಕೆಲವು ಫೋಟೊಗಳನ್ನು ಕಳುಹಿಸುವುದರ ಜೊತೆಗೆ ವಾಟ್ಸ್‌ಆ್ಯಪ್ ಮೂಲಕ ‘ಲೈವ್‌ ಲೊಕೇಶನ್‌‘ ಕೂಡ ಕಳುಹಿಸಿದ್ದರು. ಈ ಮಾಹಿತಿ ಪ್ರಕಾರ ರಕ್ಷಣಾ ತಂಡ ಅಪಘಾತ ಸ್ಥಳಕ್ಕೆ ತಲುಪುವುದು ಸುಲಭವಾಗಿದೆ ಎಂದು ತಿಳಿದುಬಂದಿದೆ.

‘ನನ್ನ ಕೋಚ್‌ನಲ್ಲಿ ಮೇಲೆ ಮಲಗಿದ್ದವರು ಕೆಳಗೆ ಬೀಳುವುದನ್ನು ಕಂಡೆ. ತಕ್ಷಣ ಕಾರ್ಯಪ್ರವೃತ್ತನಾದ ನಾನು ಪ್ರಯಾಣಿಕರನ್ನು ಹೊರಗೆ ತಂದು ಹತ್ತಿರದ ಅಂಗಡಿಯೊಂದರಲ್ಲಿ ಕೂರಿಸಿದೆ. ಪುನಃ ತೆರಳಿ ಇನ್ನುಳಿದರವರ ಸಹಾಯಕ್ಕೆ ಕೈಜೋಡಿಸಿದೆ. ಈ ಅಪಘಾತದಿಂದ ಭಾರಿ ಆಘಾತಗೊಂಡಿದ್ದೇನೆ. ಈ ವೇಳೆ ಸ್ಥಳೀಯರು, ಮೆಡಿಕಲ್‌ ಶಾಪ್‌ ಸಿಬ್ಬಂದಿಗಳು ಕೂಡ ಸಹಾಯಕ್ಕೆ ಬಂದಿದ್ದರು ‘ ಎಂದು ವೆಂಕಟೇಶ್‌ ಹೇಳಿದರು.

‘ಸ್ಥಳದಲ್ಲಿ ಕತ್ತಲೆ ಆವರಿಸಿದ್ದು, ಮೊಬೈಲ್ ಟಾರ್ಚ್‌ ಬಳಸಿ ಅಪಾಯದಲ್ಲಿದ್ದವರನ್ನು ಹೊರಗೆಳೆದು ರಕ್ಷಿಸಲಾಯಿತು‘ ಎಂದು ಹೇಳಿದರು.‌

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎನ್‌ಡಿಆರ್‌ಎಫ್‌ ಡಿಐಜಿ ಮೊಹ್ಸೆನ್‌ ಶಾಹೇದಿ, ‘ಸಮವಸ್ತ್ರ ಧರಿಸಿರಲಿ, ಇಲ್ಲದಿರಲಿ ಎನ್‌ಡಿಆರ್‌ಎಫ್‌ ಯೋಧರು ಸದಾ ಕಾರ್ಯಪ್ರವೃತ್ತರಾಗಿರುತ್ತಾರೆ‘ ಎಂದರು.

ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು–ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್‌ ರೈಲುಗಳ ನಡುವೆ ಶುಕ್ರವಾರ ರಾತ್ರಿ ಅಪಘಾತ ಸಂಭವಿಸಿತ್ತು. ದೇಶದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ರೈಲು ದುರಂತ ಇದಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT