ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸದ್ಯ ಇರುವ ಸಂವಿಧಾನದಲ್ಲಿ ಒಂದು ದೇಶ, ಒಂದು ಚುನಾವಣೆ ಅಸಾಧ್ಯ: ಚಿದಂಬರಂ

Published : 16 ಸೆಪ್ಟೆಂಬರ್ 2024, 9:50 IST
Last Updated : 16 ಸೆಪ್ಟೆಂಬರ್ 2024, 9:50 IST
ಫಾಲೋ ಮಾಡಿ
Comments

ಚಂಡೀಗಢ: ‘ದೇಶದಲ್ಲಿ ಸದ್ಯ ಇರುವ ಸಂವಿಧಾನದಿಂದಾಗಿ ಒಂದು ದೇಶ, ಒಂದು ಚುನಾವಣೆ ಜಾರಿ ಅಸಾಧ್ಯ. ಒಂದೊಮ್ಮೆ ಅದನ್ನು ಜಾರಿಗೆ ತರಲೇಬೇಕಾದರೆ ಸಂವಿಧಾನಕ್ಕೆ ಕನಿಷ್ಠ ಐದು ತಿದ್ದುಪಡಿ ಅಗತ್ಯ’ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿರುವ ಅವರು, ‘ತಮ್ಮ ಈ ಅವಧಿಯಲ್ಲೇ ಒಂದು ದೇಶ, ಒಂದು ಚುನಾವಣೆ ಜಾರಿಗೆ ತರುವ ಮಾತುಗಳನ್ನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಂವಿಧಾನ ತಿದ್ದುಪಡಿ ಚಿಂತನೆಗೆ ಬೆಂಬಲ ಸೂಚಿಸುವಷ್ಟು ಸಂಖ್ಯೆ ಲೋಕಸಭೆಯಲ್ಲೂ ಅಥವಾ ರಾಜ್ಯಸಭೆಯಲ್ಲಿ ಇಲ್ಲ. ಒಂದು ದೇಶ, ಒಂದು ಚುನಾವಣೆಗೆ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದ ವಿರೋಧವಿದೆ’ ಎಂದಿದ್ದಾರೆ. 

ಮೀಸಲಾತಿ ರದ್ದತಿಯನ್ನು ಕಾಂಗ್ರೆಸ್ ಬಯಸುತ್ತಿದೆ ಎಂಬ ಪ್ರಧಾನಿ ಮೋದಿ ಅವರ ಇತ್ತೀಚಿನ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಚಿದಂಬರಂ, ‘ಮೀಸಲಾತಿಯನ್ನು ನಾವೇಕೆ ರದ್ದು ಮಾಡುತ್ತೇವೆ’ ಎಂದು ಪ್ರಶ್ನಿಸಿದ್ದಾರೆ.

‘ಮೀಸಲಾತಿಗೆ ಇರುವ ಶೇ 50ರಷ್ಟು ಮಿತಿಯನ್ನು ತೆಗೆದುಹಾಕುತ್ತೇವೆ ಎಂದು ಹೇಳಿದ್ದೇವೆ. ಜಾತಿ ಆಧಾರಿತ ಜನಗಣತಿಯನ್ನು ಜಾರಿಗೆ ತರಬೇಕು ಎಂದು ಮೊದಲು ಹೇಳಿದ್ದೇ ಕಾಂಗ್ರೆಸ್. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಬೇಕು ಎಂಬುದು ನಮ್ಮ ಬೇಡಿಕೆ. ನರೇಂದ್ರ ಮೋದಿ ಹೇಳುವ ಯಾವುದೇ ಮಾತನ್ನು ನಂಬಬೇಡಿ’ ಎಂದು ಚಿದಂಬರಂ ಹೇಳಿದ್ದಾರೆ.

ಸೆ. 15ರಂದು ಕುರುಕ್ಷೇತ್ರದಲ್ಲಿ ನಡೆದ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ‘ದಲಿತರ ಮೀಸಲಾತಿ ಕಸಿದುಕೊಳ್ಳಲು ‘ರಾಜ ಕುಟುಂಬ‘ ಬಯಸುತ್ತಿದೆ. ಆದರೆ ನಾನು ಎಲ್ಲಿಯವರೆಗೆ ಇರುತ್ತೇನೋ, ಅಲ್ಲಿಯವರೆಗೂ ಬಿ.ಆರ್. ಅಂಬೇಡ್ಕರ್‌ ರಚಿಸಿದ ಸಂವಿಧಾನದಲ್ಲಿರುವ ಮೀಸಲಾತಿ ಬದಲಾವಣೆಗೆ ಅವಕಾಶ ನೀಡುವುದಿಲ್ಲ’ ಎಂದಿದ್ದರು.

‘ಸತತ ಚುನಾವಣೆಗಳು ದೇಶದ ಪ್ರಗತಿಗೆ ಅಡಚಣೆ ಉಂಟು ಮಾಡುತ್ತಿವೆ. ಇದರಿಂದಾಗಿ ಒಂದು ದೇಶ, ಒಂದು ಚುನಾವಣೆ ಭಾರತಕ್ಕೆ ಅಗತ್ಯ’ ಎಂದು ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಈ ಹೇಳಿಕೆಯನ್ನೂ ನೀಡಿದ್ದರು. 

ಹರಿಯಾಣ ಚುನಾವಣೆಯ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಿದಂಬರಂ, ‘ಚುನಾವಣೆಗೂ ಮೊದಲು ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಣೆಯನ್ನು ಕಾಂಗ್ರೆಸ್ ಎಂದಿಗೂ ಮಾಡುವುದಿಲ್ಲ. ಚುನಾವಣೆ ಮತದಾನದ ನಂತರ, ಚುನಾಯಿತರ ಅಭಿಪ್ರಾಯವನ್ನು ಕೇಳಲಾಗುವುದು. ನಂತರ ಮುಖ್ಯಮಂತ್ರಿ ಯಾರು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಕಾಂಗ್ರೆಸ್‌ನ ಈ ಪದ್ಧತಿಯು ಹರಿಯಾಣ ಚುನಾವಣೆಯಲ್ಲೂ ಜಾರಿಗೆ ಬರಲಿದೆ’ ಎಂದಿದ್ದಾರೆ.

'ಡಬಲ್ ಎಂಜಿನ್ ಸರ್ಕಾರ ಕುರಿತು ಬಿಜೆಪಿ ಸದಾ ಮಾತನಾಡುತ್ತದೆ. ಇದರಲ್ಲಿ ಒಂದು ಎಂಜಿನ್‌ಗೆ ಇಂಧನವಿಲ್ಲ. ಮತ್ತೊಂದು ಕೆಟ್ಟು ಕೂತಿದೆ. ಇಂಥ ಸರ್ಕಾರದ ಪ್ರಯೋಜನವಾದರೂ ಏನು? ಇಂಥ ನಿಷ್ಕ್ರಿಯ ಸರ್ಕಾರವನ್ನು ಗುಜರಿಗೆ ಹಾಕುವ ಸಮಯ ಬಂದಿದೆ’ ಎಂದು ಚಿದಂಬರಂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT