ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2023 ಶೈಕ್ಷಣಿಕ ವರ್ಷ| 10, 12ನೇ ತರಗತಿಯಲ್ಲಿ 65 ಲಕ್ಷ ವಿದ್ಯಾರ್ಥಿಗಳು ಫೇಲ್‌

2023ನೇ ಶೈಕ್ಷಣಿಕ ಸಾಲಿನ ಪರೀಕ್ಷಾ ಫಲಿತಾಂಶದ ವಿಶ್ಲೇಷಣೆ * ರಾಜ್ಯ ಮಂಡಳಿಗಳಲ್ಲಿಯೇ ಹೆಚ್ಚಿರುವ ಅನುತ್ತೀರ್ಣ ಪ್ರಮಾಣ
Published 21 ಆಗಸ್ಟ್ 2024, 23:30 IST
Last Updated 21 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಕಳೆದ ಶೈಕ್ಷಣಿಕ ವರ್ಷ (2023) 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ 65 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ‘ಫೇಲ್’ ಆಗಿದ್ದಾರೆ. ಅನುತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆಯು ಕೇಂದ್ರೀಯ ಮಂಡಳಿಗಳಿಗಿಂತ ರಾಜ್ಯ ಪರೀಕ್ಷಾ ಮಂಡಳಿಗಳ ವ್ಯಾಪ್ತಿಯಲ್ಲಿಯೇ ಹೆಚ್ಚಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯದ (ಎಂಒಇ) ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಒಟ್ಟು 59 ಶಾಲಾ ಪರೀಕ್ಷಾ ಮಂಡಳಿಗಳಿವೆ. ಈ ಪೈಕಿ ರಾಜ್ಯ ಮಂಡಳಿಗಳು 56 ಆಗಿದ್ದರೆ, ಮೂರು ರಾಷ್ಟ್ರೀಯ ವ್ಯಾಪ್ತಿಯ ಮಂಡಳಿಗಳಾಗಿವೆ. ಖಾಸಗಿ ಮತ್ತು ಅನುದಾನಿತ ಶಾಲೆಗಳಿಗಿಂತ ಸರ್ಕಾರಿ ಶಾಲೆ/ಕಾಲೇಜುಗಳಿಂದಲೇ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರು 12ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದಾರೆ ಎನ್ನುತ್ತವೆ ಅಂಕಿ ಅಂಶಗಳು.‌

‘10ನೇ ತರಗತಿಯ 33.5 ಲಕ್ಷ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಪ್ರವೇಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಪೈಕಿ 5.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರೆ, 28 ಲಕ್ಷ ವಿದ್ಯಾರ್ಥಿಗಳು ಫೇಲ್‌ ಆಗಿದ್ದಾರೆ. ಹಿರಿಯ ಮಾಧ್ಯಮಿಕ ಹಂತದಲ್ಲಿ ಒಟ್ಟು ದಾಖಲಾತಿ ಅನುಪಾತ (ಜಿಇಆರ್‌) ಕಡಿಮೆ ಇರಲು ಇದು ಪ್ರಮುಖ ಕಾರಣ’ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಹೇಳುತ್ತಾರೆ.

ಅದೇ ರೀತಿ 12ನೇ ತರಗತಿಯ 32.4 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪ್ರವೇಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಪೈಕಿ 5.2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರೆ, 27.2 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಕೇಂದ್ರ ಮಂಡಳಿ ಮುಂದೆ:

10ನೇ ತರಗತಿಯಲ್ಲಿ ಫೇಲಾದ ವಿದ್ಯಾರ್ಥಿಗಳ ಪ್ರಮಾಣ ಕೇಂದ್ರ ಮಂಡಳಿ ವ್ಯಾಪ್ತಿಯಲ್ಲಿ ಶೇ 6ರಷ್ಟಿದ್ದರೆ, ರಾಜ್ಯ ಮಂಡಳಿಗಳ ವ್ಯಾಪ್ತಿಯಲ್ಲಿ ಶೇ 16ರಷ್ಟಿದೆ. 12ನೇ ತರಗತಿಯಲ್ಲಿ ಕೇಂದ್ರ ಮಂಡಳಿಯಲ್ಲಿ ಫೇಲಾದ ವಿದ್ಯಾರ್ಥಿಗಳ ಪ್ರಮಾಣ ಶೇ 12ರಷ್ಟಿದ್ದರೆ, ರಾಜ್ಯ ಮಂಡಳಿಗಳ ವ್ಯಾಪ್ತಿಯಲ್ಲಿ ಶೇ 18ರಷ್ಟಿದೆ ಎಂದು ಅವರು ಮಾಹಿತಿ ನೀಡಿದರು.

ಎರಡೂ ತರಗತಿಗಳಿಗೆ ಸಂಬಂಧಿಸಿದಂತೆ ಮುಕ್ತ ಶಾಲೆಗಳ ಸಾಧನೆ ಕಳಪೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

10ನೇ ತರಗತಿಯಲ್ಲಿ ಅನುತ್ತೀರ್ಣರಾದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮಧ್ಯಪ್ರದೇಶ ಮಂಡಳಿಗೆ ಸೇರಿದವರು. ನಂತರದ ಸ್ಥಾನದಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಿವೆ. 12ನೇ ತರಗತಿಯಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಫೇಲಾಗಿದ್ದರೆ, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ ಇದೆ.

2022ನೇ ಸಾಲಿನ ಫಲಿತಾಂಶದೊಂದಿಗೆ ಹೋಲಿಸಿದರೆ 2023ರ ಫಲಿತಾಂಶ ಕುಸಿತವಾಗಿದೆ. ಪರೀಕ್ಷೆಗೆ ನಿಗದಿಪಡಿಸಿದ್ದ ವಿಸ್ತೃತ ಪಠ್ಯಕ್ರಮ ಇದಕ್ಕೆ ಕಾರಣ ಇರಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಬಾಲಕಿಯರೇ ಮುಂದೆ:

ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ 10 ಮತ್ತು 12ನೇ ತರಗತಿಗಳಲ್ಲಿ ಬಾಲಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಿಯರು ಪರೀಕ್ಷೆ ಬರೆದಿದ್ದಾರೆ. ಬಹುಶಃ ಪೋಷಕರು ತಮ್ಮಲ್ಲಿನ ಲಿಂಗ ತಾರತಮ್ಯ ಧೋರಣೆಯಿಂದಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಹಣ ವ್ಯಯಿಸಲು ಆಸಕ್ತಿ ಹೊಂದಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಅದಾಗ್ಯೂ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿನ ಉತ್ತೀರ್ಣ ಪ್ರಮಾಣದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಅವರು ವಿವರಿಸುತ್ತಾರೆ.

ಮುಖ್ಯಾಂಶಗಳು

* 10ನೇ ತರಗತಿಯಲ್ಲಿ 33.5 ಲಕ್ಷ ವಿದ್ಯಾರ್ಥಿಗಳು ಫೇಲ್‌

* 12ನೇ ತರಗತಿಯ 32.4 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣ

* ಉತ್ತೀರ್ಣ ಪ್ರಮಾಣದಲ್ಲಿ ಬಾಲಕಿಯರದ್ದೇ ಮೇಲುಗೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT