ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಎಟಿಎಫ್‌ ಷರತ್ತು ಈಡೇರಿಸುವಲ್ಲಿ ಪಾಕ್‌ ವಿಫಲ

ವಿಶ್ವಬ್ಯಾಂಕ್‌, ಐಎಂಎ ಹಾಗೂ ಇಯುನಿಂದ ಹಣಕಾಸು ನೆರವಿಗೆ ಕತ್ತರಿ ಸಂಭವ
Last Updated 16 ಜೂನ್ 2019, 20:35 IST
ಅಕ್ಷರ ಗಾತ್ರ

ನವದೆಹಲಿ: ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದರ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌) ವಿಧಿಸಿದ್ದ ಷರತ್ತುಗಳನ್ನು ಈಡೇರಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ.

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎ), ವಿಶ್ವ ಬ್ಯಾಂಕ್‌ ಹಾಗೂ ಯುರೋಪಿಯನ್‌ ಯೂನಿಯನ್‌ (ಇಯು) ಗಳು ಪಾಕಿಸ್ತಾನಕ್ಕೆ ಒದಗಿಸುತ್ತಿರುವ ಹಣಕಾಸು ನೆರವಿಗೆ ಮತ್ತಷ್ಟು ಕತ್ತರಿ ಹಾಕುವ ಸಾಧ್ಯತೆ ಇದೆ. ಹೀಗಾಗಿ ಪಾಕಿಸ್ತಾನ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಗುರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಉಗ್ರ ಸಂಘಟನೆಗಳಾದ ಲಷ್ಕರ್‌–ಎ–ತಯಬಾ (ಎಲ್‌ಇಟಿ), ಜೈಷ್‌–ಎ–ಮೊಹಮ್ಮದ್‌ (ಜೆಇಎಂ), ಉಗ್ರರ ಚಟುವಟಿಕೆಗಳನ್ನು ಬೆಂಬಲಿಸುವ ಜಮಾತ್‌–ಉದ್‌–ದಾವಾ ಹಾಗೂ ಫಲ್ಹಾ–ಎ–ಇನ್ಸಾನಿಯತ್‌ ಫೌಂಡೇಷನ್‌ಗಳಿಗೆ ಹಣ ಹರಿದು ಬರುವುದರ ಮೇಲೆ ನಿಗಾ ಇಡುವಂತೆ ಸೂಚಿಸಿದ್ದ ಎಫ್‌ಎಟಿಎಫ್‌, ಈ ಸಂಬಂಧ 27 ಅಂಶಗಳನ್ನು ಈಡೇರಿಸುವಂತೆ ತಾಕೀತು ಮಾಡಿತ್ತು. ಈ ಪೈಕಿ 25 ಅಂಶಗಳನ್ನು ಈಡೇರಿಸುವಲ್ಲಿಯೇ ಪಾಕಿಸ್ತಾನ ವಿಫಲವಾಗಿದೆ ಎಂದು ಸಂಸ್ಥೆ ಮೂಲಗಳು ಹೇಳಿವೆ.

ಉಗ್ರರ ಸಂಘಟನೆಗಳಿಗೆ ಹಣಕಾಸು ನೀಡುವುದಕ್ಕೆ ಕರಿವಾಣ ಹಾಕುವಲ್ಲಿ ಗಂಭೀರ ಪ್ರಯತ್ನ ಮಾಡದ ಕಾರಣ, ಪಾಕಿಸ್ತಾನವನ್ನು ಎಫ್‌ಎಟಿಎಫ್‌ 2018ರ ಜೂನ್‌ನಲ್ಲಿ ’ಬೂದು ಪಟ್ಟಿಗೆ‘ ಸೇರಿಸಿತ್ತು. ಅಲ್ಲದೇ, 27 ಅಂಶಗಳನ್ನು ಈಡೇರಿಸುವ ಸಲುವಾಗಿ 2019ರ ಅಕ್ಟೋಬರ್‌ ವರೆಗೆ ಗಡುವು ನೀಡಿತ್ತು.

’ಬರುವ ಅಕ್ಟೋಬರ್‌ನಲ್ಲಿ ಎಫ್‌ಎಟಿಎಫ್‌ನ ಸಾಮಾನ್ಯಸಭೆ ನಡೆಯಲಿದೆ. ಅಷ್ಟರೊಳಗಾಗಿ, ಸಂಸ್ಥೆ ನೀಡಿರುವ ಅಂಶಗಳನ್ನು ಈಡೇರಿಸಲು ಪಾಕಿಸ್ತಾನಕ್ಕೆ ಕೊನೆ ಅವಕಾಶ ಇದೆ‘ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT