ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ಸಿಎಂ ಆಯ್ಕೆ ವಿಚಾರವಾಗಿ ಗೆಹಲೋತ್ ಬಣದಿಂದ ಷರತ್ತು: ಅಜಯ್ ಮಾಕನ್ ಕಿಡಿ

Last Updated 26 ಸೆಪ್ಟೆಂಬರ್ 2022, 10:56 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಬಣದ ಶಾಸಕರು ಪಕ್ಷವು ನಿರ್ಣಯ ತೆಗೆದುಕೊಳ್ಳುವುದಕ್ಕೆ ಷರತ್ತುಗಳನ್ನು ವಿಧಿಸಿರುವುದಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಅಜಯ್‌ ಮಾಕನ್‌ ಕಿಡಿಕಾರಿದ್ದಾರೆ.

ಸಿಎಂ ಗೆಹಲೋತ್‌ ಅವರು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇದರಿಂದಾಗಿ ತೆರವಾಗಲಿರುವ ಮುಖ್ಯಮಂತ್ರಿ ಸ್ಥಾನಕ್ಕೆ ಪಕ್ಷದ ವರಿಷ್ಠರು ಸಚಿನ್‌ ಪೈಲಟ್‌ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂಬುದನ್ನು ಅರಿತು, ಗೆಹಲೋತ್‌ ಆಪ್ತ ವಲಯದ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದರು. ಜೊತೆಗೆ ಪಕ್ಷದ ವೀಕ್ಷಕರನ್ನಾಗಿ ಹೈಕಮಾಂಡ್‌ ಕಳುಹಿಸಿರುವ ಅಜಯ್‌ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಭಾನುವಾರ ಸಂಜೆ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಯಿಂದಲೂ ಅಂತರ ಕಾಯ್ದುಕೊಂಡಿದ್ದರು.

ನವದೆಹಲಿಗೆ ತೆರಳುವುದಕ್ಕೂ ಮುನ್ನಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಮಾಕನ್, 'ಕಾಂಗ್ರೆಸ್ ಪಕ್ಷದ 75 ವರ್ಷಗಳ ಇತಿಹಾಸದಲ್ಲಿ ಷರತ್ತುಗಳಆಧಾರದಲ್ಲಿ ನಿರ್ಣಯಗಳನ್ನು ತೆಗೆದುಕೊಂಡಿಲ್ಲ. ಇಲ್ಲಿನ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್‌ ಮುಖ್ಯಸ್ಥರಿಗೆ ತಿಳಿಸಿಕೊಡಲಾಗುವುದು. ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ಹೇಳಿದ್ದಾರೆ.

'ನಿರ್ಣಯಗಳು ಯಾವುದೇ ಹಿತಾಸಕ್ತಿ ಸಂಘರ್ಷವನ್ನು ಹೊಂದಿರಬಾರದು. ಯಾರು ಚುನಾವಣೆಗೆ ಸ್ಪರ್ಧಿಸಿ, ನಾಳೆ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೋ ಅವರು ನಿರ್ಧಾರಗಳನ್ನು ತೆಗೆದುಕೊಳ್ಳಲಿ ಎಂಬುದು ಹಿತಾಸಕ್ತಿ ಸಂಘರ್ಷವಾಗುತ್ತದೆ. ಇದು ತಪ್ಪು' ಎಂದು ಗೆಹಲೋತ್‌ ಅವರ ಹೆಸರನ್ನು ಹೇಳದೆ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರಾದ ಶಾಂತಿ ಧರಿವಾಲ್‌, ಮಹೇಶ್‌ ಜೋಶಿ ಹಾಗೂ ಪ್ರತಾಪ್‌ ಸಿಂಗ್‌ ಖಚಾರಿಯಾವಾಸ್‌ ಅವರುಗೆಹಲೋತ್‌ ಬೆಂಬಲಿಗರ ಪ್ರತಿನಿಧಿಗಳಾಗಿ ಮಾಕನ್ ಹಾಗೂ ಖರ್ಗೆ ಅವರನ್ನು ಭಾನುವಾರ ರಾತ್ರಿ ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿಯಾಗಿದ್ದರು.

ಈ ವೇಳೆ,ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಬಳಿಕ ರಾಜಸ್ಥಾನ ಮುಖ್ಯಮಂತ್ರಿ ಆಯ್ಕೆಯಾಗಬೇಕು, ರಾಜ್ಯದಲ್ಲಿ 2020ರಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ ಸರ್ಕಾರಕ್ಕೆ ಬೆಂಬಲವಾಗಿ ನಿಂತಿದ್ದ ಶಾಸಕರಲ್ಲಿಯೇ ಯಾರನ್ನಾದರೂ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು ಹಾಗೂ ಕಾಂಗ್ರೆಸ್‌ ವೀಕ್ಷಕರು ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸದೆ ಸಾಮೂಹಿಕವಾಗಿ ಚರ್ಚಿಸಬೇಕು ಎಂಬ ಷರತ್ತುಗಳನ್ನು ಇಟ್ಟಿದ್ದರು.

ಈ ಬಗ್ಗೆಯೂ ಹೇಳಿಕೆ ನೀಡಿರುವ ಮಾಕನ್, 'ನಾವು ಎಲ್ಲವನ್ನೂ ಕೇಳಿಸಿಕೊಂಡಿದ್ದೇವೆ. ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಎಲ್ಲ ವಿಚಾರವನ್ನೂ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲಾಗುವುದು. ಮುಕ್ತವಾಗಿ ಅಭಿಪ್ರಾಯಗಳನ್ನುಹಂಚಿಕೊಳ್ಳಲಿ ಎಂಬ ಕಾರಣಕ್ಕೆ ಎಲ್ಲರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸುವುದಾಗಿ ತಿಳಿಸಿದ್ದೆವು' ಎಂದಿದ್ದಾರೆ.

'ಎಲ್ಲರ ಅಭಿಪ್ರಾಯಗಳನ್ನು ಹೈಕಮಾಂಡ್‌ಗೆ ತಿಳಿಸಲಾಗುವುದು. ಆ ಬಗ್ಗೆ ಯಾರೂ ಚಿಂತಿಸಬೇಕಿಲ್ಲ' ಎಂದೂ ಭರವಸೆ ನೀಡಿದ್ದಾರೆ.

ತಾವು ಕರೆದಿದ್ದ ಸಭೆಗೆಗೆಹಲೋತ್‌ ಬಣದ ಶಾಸಕರು ಹಾಜರಾಗಲಿದ್ದಾರೆ ಎಂದು ಮಾಕನ್‌ ಹಾಗು ಖರ್ಗೆ ಭಾನುವಾರ ರಾತ್ರಿ ಕಾಯುತ್ತಿದ್ದರು. ಆದರೆ, ಯಾರೊಬ್ಬರೂ ಸಭೆಗೆ ವಾಪಸ್‌ ಆಗಿರಲಿಲ್ಲ. ಹೀಗಾಗಿ ವರಿಷ್ಠರು ದೆಹಲಿಗೆ ಇಂದು ವಾಪಸ್‌ ಅಗುತ್ತಿದ್ದಾರೆ.

'ಇಲ್ಲಿನ ಬೆಳವಣಿಗೆಗಳ ಬಗ್ಗೆ ಸೋನಿಯಾ ಗಾಂಧಿ ಅವರಿಗೆ ಮಾಹಿತಿ ನೀಡಲು ದೆಹಲಿಗೆ ಹಿಂತಿರುಗುತ್ತಿದ್ದೇವೆ' ಎಂದೂ ಮಾಕನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT