ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಲೋಪ: ಕಚ್ಚಾಟ ಬೇಡ- ಪ್ರಧಾನಿ ಮೋದಿ

ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತು
Published 17 ಡಿಸೆಂಬರ್ 2023, 13:20 IST
Last Updated 17 ಡಿಸೆಂಬರ್ 2023, 13:20 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಭದ್ರತಾ ಲೋಪವನ್ನು ಹಗುರವಾಗಿ ಪರಿಗಣಿಸಲು ಆಗದು, ಈ ವಿಚಾರವಾಗಿ ಯಾರೂ ಕಚ್ಚಾಟದಲ್ಲಿ ತೊಡಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹಿಂದಿ ದಿನಪತ್ರಿಕೆ ‘ದೈನಿಕ್ ಜಾಗರಣ್‌’ಗೆ ಸಂದರ್ಶನ ನೀಡಿರುವ ಮೋದಿ ಅವರು, ‘ಘಟನೆಯ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ಕೈಗೊಂಡಿವೆ. ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ಘಟನೆಯ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಮಾಡಬೇಕು ಹಾಗೂ ಅವರ ಉದ್ದೇಶ ಏನಿತ್ತು ಎಂಬುದನ್ನು ಕಂಡುಕೊಳ್ಳಬೇಕು’ ಎಂದು ಹೇಳಿದ್ದಾರೆ.

ಭದ್ರತಾ ಲೋಪವು ‘ನೋವಿನ ಸಂಗತಿ ಹಾಗೂ ಕಳವಳಕಾರಿ’ ಎಂದು ಮೋದಿ ಅವರು ಹೇಳಿದ್ದಾಗಿ ‍ಪತ್ರಿಕೆಯು ತಿಳಿಸಿದೆ.

ಮಧ್ಯಪ್ರದೇಶ, ಛತ್ತೀಸಗಢ ಹಾಗೂ ರಾಜಸ್ಥಾನದಲ್ಲಿ ಹೊಸ ಮುಖಗಳನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಆಯ್ಕೆ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಮೋದಿ ಅವರು, ‘ಈ ನಾಯಕರು ಅನುಭವ ಹೊಂದಿದ್ದಾರೆ, ಕಷ್ಟಪಟ್ಟು ಕೆಲಸ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

ದೇಶದಲ್ಲಿ ಸಮಾಜದ ಮೇಲೆ ಪ್ರಭಾವ ಬೀರುವ ಬಹುದೊಡ್ಡ ವರ್ಗವೊಂದು ಹೊಸ ರೀತಿಯಲ್ಲಿ ಆಲೋಚನೆ ನಡೆಸದೆ ಇರುವುದು, ಸೀಮಿತವಾದ ದೃಷ್ಟಿಕೋನ ಹೊಂದಿರುವುದು ದುರದೃಷ್ಟಕರ ಸಂಗತಿ. ಇದು ರಾಜಕೀಯಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ರಂಗಗಳಲ್ಲಿಯೂ ಈ ಸ್ವಭಾವವು ಸಮಸ್ಯೆ ಸೃಷ್ಟಿಸುತ್ತಿದೆ. ಯಾವುದೇ ಕ್ಷೇತ್ರದಲ್ಲಿ ಕೆಲವರು ದೊಡ್ಡ ಹೆಸರು ಸಂಪಾದಿಸಿದರೆ, ಇತರರ ಕಡೆ ಗಮನವೇ ಹರಿಯುವುದಿಲ್ಲ. ರಾಜಕಾರಣದಲ್ಲಿಯೂ ಇದೇ ಆಗುತ್ತದೆ ಎಂದು ಮೋದಿ ಅವರು ವಿವರಿಸಿದ್ದಾರೆ.

ಕೆಲವು ದಶಕಗಳವರೆಗೆ ಮಾಧ್ಯಮಗಳ ಗಮನವು ದೇಶದ ಕೆಲವು ಕುಟುಂಬಗಳ ಮೇಲೆ ಮಾತ್ರ ಇತ್ತು. ಇದರಿಂದಾಗಿ, ಹೊಸಬರ ಪ್ರತಿಭೆ ಹಾಗೂ ಅವರಿಂದ ಪ್ರಯೋಜನ ಪಡೆದುಕೊಳ್ಳುವ ಸಾಧ್ಯತೆಗಳ ಬಗ್ಗೆ ಚರ್ಚೆ ಆಗುತ್ತಿಲ್ಲ ಎಂದಿದ್ದಾರೆ. ‘ಹೀಗಾಗಿಯೇ, ಕೆಲವರು ನಿಮಗೆ ಹೊಸಬರಾಗಿ ಕಾಣಿಸುತ್ತಾರೆ. ಆದರೆ ವಾಸ್ತವ ಏನೆಂದರೆ, ಅವರು ಹೊಸಬರಲ್ಲ. ಅವರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಹಾಗೂ ಅನುಭವ ಸಂಪಾದಿಸಿದ್ದಾರೆ’ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ನೀಡಿದ್ದ ಸ್ಥಾನಮಾನ ಹಿಂಪಡೆದ ಕುರಿತು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ‍ಪ್ರತಿಕ್ರಿಯೆ ನೀಡಿದ ಪ್ರಧಾನಿ, ‘ವಿಶ್ವದ ಯಾವ ಶಕ್ತಿಯಿಂದಲೂ ಇನ್ನು ಅದನ್ನು ವಾಪಸ್ ತರಲು ಸಾಧ್ಯವಿಲ್ಲ’ ಎಂದಿದ್ದಾರೆ.

ಚರ್ಚೆಯಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಧಾನಿ: ಕಾಂಗ್ರೆಸ್ ಟೀಕೆ

ನವದೆಹಲಿ (ಪಿಟಿಐ): ಸಂಸತ್ತಿನ ಭದ್ರತಾ ಲೋಪದ ಮೇಲಿನ ಚರ್ಚೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ಭಾನುವಾರ ಆರೋಪಿಸಿದೆ. ಲೋಕಸಭೆಯೊಳಕ್ಕೆ ಜಿಗಿದವರಿಗೆ ಪಾಸ್ ದೊರಕಿಸಿಕೊಡುವಲ್ಲಿ ಮೈಸೂರು ಸಂಸದ, ಬಿಜೆಪಿಯ ಪ್ರತಾಪ್ ಸಿಂಹ ಅವರ ಪಾತ್ರದ ಬಗ್ಗೆ ಪ್ರಶ್ನೆಗಳು ಎದುರಾಗುತ್ತವೆ ಎಂಬ ಕಾರಣಕ್ಕೆ ಪ್ರಧಾನಿ ಹೀಗೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ದೂರಿದೆ.

ಭದ್ರತಾ ಲೋಪದ ವಿಚಾರವಾಗಿ ಜಗಳ ಬೇಡ ಎಂದು ಪ್ರಧಾನಿ ಮೋದಿ ಹೇಳಿದ ನಂತರದಲ್ಲಿ ಕಾಂಗ್ರೆಸ್ ಈ ಮಾತು ಹೇಳಿದೆ.

‘ಡಿಸೆಂಬರ್ 13ರಂದು ಲೋಕಸಭೆಯಲ್ಲಿ ನಡೆದ ಅಸಾಮಾನ್ಯ ವಿದ್ಯಮಾನದ ವಿಚಾರವಾಗಿ ಪ್ರಧಾನಿಯವರು ಕೊನೆಗೂ ಮೌನ ಮುರಿದಿದ್ದಾರೆ. ತನಿಖೆ ಆಗಬೇಕು; ಚರ್ಚೆ ಅಲ್ಲ, ತನಿಖೆಯು ನಡೆದಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇಂಡಿಯಾ ಮೈತ್ರಿಕೂಟದ ಪಕ್ಷಗಳು ಕೇಳುತ್ತಿರುವುದು ಹಾಗೂ ಮುಂದೆಯೂ ಕೇಳಲಿರುವುದು ಡಿಸೆಂಬರ್ 13ರಂದು ಆಗಿದ್ದೇನು ಹಾಗೂ ನಿರ್ದಿಷ್ಟವಾಗಿ ಅದು ಹೇಗೆ ಆಯಿತು ಎಂಬ ಪ್ರಶ್ನೆಯನ್ನು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT