ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದೇವ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ

ಪತಂಜಲಿ ಜಾಹೀರಾತು ; ಕ್ರಮ ಏಕೆ ಕೈಗೊಳ್ಳಲಿಲ್ಲ– ಕೇಂದ್ರಕ್ಕೆ ಪ್ರಶ್ನೆ
Published 2 ಏಪ್ರಿಲ್ 2024, 13:59 IST
Last Updated 2 ಏಪ್ರಿಲ್ 2024, 13:59 IST
ಅಕ್ಷರ ಗಾತ್ರ

ನವದೆಹಲಿ: ಪತಂಜಲಿ ಆಯುರ್ವೇದ ಕಂಪನಿಯು ತನ್ನ ಪ್ರಶ್ನಾರ್ಹ ಜಾಹೀರಾತುಗಳನ್ನು ಸಮರ್ಥಿಸಿಕೊಂಡಿರುವುದನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಕಟುಶಬ್ದಗಳಲ್ಲಿ ಖಂಡಿಸಿದೆ. ಅಲ್ಲದೇ, ಯೋಗಗುರು ಬಾಬಾ ರಾಮದೇವ್‌ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಈ ಹಿಂದೆ ಕೇಳಿರುವ ಕ್ಷಮೆಯು ಕೇವಲ ‘ಬಾಯಿಮಾತಿಗೆ ಅಷ್ಟೆ’ ಎಂದೂ ಕೋರ್ಟ್ ಆಕ್ಷೇಪಿಸಿದೆ.‌

ತನ್ನ ಕಂಪನಿಯ ಉತ್ಪನ್ನಗಳ ಫಲದಾಯಕತೆ ಕುರಿತು ಸುಳ್ಳು ಜಾಹೀರಾತು ಪ್ರಕಟಿಸಿರುವ ಮತ್ತು ಅಲೋಪಥಿ ಚಿಕಿತ್ಸಾ ವಿಧಾನದ ಕುರಿತು ಸುಳ್ಳು ಮಾಹಿತಿ ಹರಿಬಿಟ್ಟ ಆರೋಪದ ಮೇಲೆ ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾ ಹಿಮಾ ಕೊಹ್ಲಿ ಮತ್ತು ಅಸಾನುದ್ದೀನ್‌ ಅಮಾನುಲ್ಲಾ ಅವರಿದ್ದ ನ್ಯಾಯಪೀಠ ಹೀಗೆ ಹೇಳಿದೆ.

ಕೆಲ ದಾಖಲೆಗಳನ್ನು ಸಲ್ಲಿಸುವಂತೆ ಪತಂಜಲಿ ಕಂಪನಿಗೆ ಕೋರ್ಟ್‌ ಸೂಚಿಸಿತ್ತು. ಆದರೆ, ಕಂಪನಿ ಸಲ್ಲಿಸಿರುವ ದಾಖಲೆಗಳಲ್ಲಿ ಕೆಲವು ತಿರುಚಲಾದ ದಾಖಲೆಗಳೂ ಸೇರಿವೆ ಎಂದ ನ್ಯಾಯಪೀಠ, ‘ಇದು ಸಂಪೂರ್ಣ ಅವಿಧೇಯತೆ’ ಎಂದು ಹೇಳಿತು.  

‘ಕೋರ್ಟ್‌ಗೆ ನೀಡಿರುವ ಭರವಸೆಗೆ ನೀವು ಬದ್ಧರಾಗಿರಬೇಕು. ಆದರೆ ನೀವು ಎಲ್ಲಾ ಎಲ್ಲೆಗಳನ್ನೂ ಮೀರಿದ್ದೀರಿ’ ಎಂದು ರಾಮದೇವ್‌ ಮತ್ತು ಬಾಲಕೃಷ್ಣ ಅವರಿಗೆ ಪೀಠ ಹೇಳಿತು. ಅರ್ಜಿಯ ಮುಂದಿನ ವಿಚಾರಣೆಯನ್ನು ಏಪ್ರಿಲ್‌ 10ಕ್ಕೆ ನಿಗದಿಪಡಿಸಿತು.

ಕೇಂದ್ರದ ವಿರುದ್ಧ ಕಿಡಿ: ಕೇಂದ್ರ ಸರ್ಕಾರವನ್ನೂ ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತು. ಕೋವಿಡ್‌– 19 ಸಾಂಕ್ರಾಮಿಕದಿಂದ ಜನರು ಸಂಕಷ್ಟಕ್ಕೀಡಾಗಿದ್ದ ವೇಳೆ ಕಂಪನಿ ಹೊರಡಿಸಿದ್ದ ಸುಳ್ಳು ಜಾಹೀರಾತುಗಳ ವಿರುದ್ಧ ಕೇಂದ್ರ ಸರ್ಕಾರ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿತು. 

ಕ್ರಮ ತೆಗೆದುಕೊಳ್ಳುವ ಬದಲಾಗಿ ಕೇಂದ್ರ ಸರ್ಕಾರವು ಈ ಕಂಪನಿಯ ಉತ್ಪನ್ನಗಳನ್ನು ಮುಖ್ಯ ಔಷಧದ (ಲಸಿಕೆ) ಜೊತೆ ಪೂರಕ ಪೋಷಣೆಯಾಗಿ ಸೇವಿಸಬಹುದು ಎಂದು ಅನುಮೋದಿಸಿತ್ತು ಎಂದು ನ್ಯಾಯಪೀಠ ಆಕ್ಷೇಪಿಸಿತು.

ಕಂಪನಿಯ ಉತ್ಪನ್ನಗಳ ಉಪಲಬ್ಧತೆ ವಿಷಯದಲ್ಲಿ ಸುಳ್ಳು ಜಾಹೀರಾತು ಪ್ರಕಟಿಸಿದ ಕುರಿತು ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್‌ಗೆ ಪತಂಜಲಿ ಆಯುರ್ವೇದ ಕಂಪನಿಗೆ ಸೂಚಿಸಿತ್ತು. ಪ್ರತಿಕ್ರಿಯಿಸಲು ಕಂಪನಿ ವಿಫಲವಾದ ಕಾರಣ, ರಾಮದೇವ್‌ ಮತ್ತು ಆಚಾರ್ಯ ಅವರಿಗೆ ಕೋರ್ಟ್‌ಗೆ ಖುದ್ದಾಗಿ ಹಾಜರಾಗುವಂತೆ ಮಾರ್ಚ್‌ 19ರಂದು ನಿರ್ದೇಶಿಸಿತ್ತು. ಹೀಗಾಗಿ ಅವರಿಬ್ಬರೂ ಕೋರ್ಟ್‌ಗೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT