ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೆಪ್ಪರ್‌ಫ್ರೈ’ ಕಂಪನಿ ಸಹಸಂಸ್ಥಾಪ‍ಕ ಅಂಬರೀಶ್ ಮೂರ್ತಿ ಹೃದಯಾಘಾತದಿಂದ ನಿಧನ

Published 8 ಆಗಸ್ಟ್ 2023, 11:10 IST
Last Updated 8 ಆಗಸ್ಟ್ 2023, 11:10 IST
ಅಕ್ಷರ ಗಾತ್ರ

ಲಡಾಕ್‌: ಪೀಠೋಪಕರಣಗಳ ಆನ್‌ಲೈನ್ ಮಾರುಕಟ್ಟೆ ‘ಪೆಪ್ಪರ್‌ಫ್ರೈ’ ಕಂಪನಿಯ ಸಹ ಸಂಸ್ಥಾಪಕ ಅಂಬರೀಶ್ ಮೂರ್ತಿ ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅಂಬರೀಶ್‌ ಮೂರ್ತಿ ನಿಧನದ ಬಗ್ಗೆ ಕಂಪನಿಯ ಮತ್ತೋರ್ವ ಸಹಸಂಸ್ಥಾಪಕ ಆಶಿಶ್‌ ಷಾ ಟ್ವೀಟ್ ಮಾಡಿ ತಿಳಿಸಿದ್ದಾರೆ.

‘ನನ್ನ ಆತ್ಮೀಯ ಗೆಳೆಯ, ಸಹೋದರ, ಮಾರ್ಗದರ್ಶಕ ಅಂಬರೀಶ್‌ ಮೂರ್ತಿ ನಿಧನರಾಗಿದ್ದಾರೆ ಎಂಬ ಸುದ್ದಿ ತಿಳಿಸಲು ಬಹಳ ದುಃಖವಾಗುತ್ತಿದೆ. ಸೋಮವಾರ ರಾತ್ರಿ ಲೆಹ್‌ನಲ್ಲಿ ತಂಗಿದ್ದ ವೇಳೆ ಹೃದಯಾಘಾತ ಸಂಭವಿಸಿದೆ. ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ನೀಡುವಂತೆ ಆ ದೇವರಲ್ಲಿ ಪ್ರಾರ್ಥಿಸಿ’ ಎಂದು ಆಶಿಶ್‌ ಹೇಳಿದ್ದಾರೆ.

51 ವರ್ಷದ ಅಂಬರೀಶ್‌ ಮೂರ್ತಿ ಒಬ್ಬ ಹವ್ಯಾಸಿ ಬೈಕ್‌ ರೈಡರ್‌ ಆಗಿದ್ದು, ಪ್ರವಾಸದ ಭಾಗವಾಗಿ ಮುಂಬೈನಿಂದ ಲೆಹ್‌ಗೆ ಬೈಕ್‌ನಲ್ಲಿಯೇ ತೆರಳಿದ್ದರು. ಲೇಹ್‌ನಲ್ಲಿ ತಂಗಿದ್ದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ.

2011ರಲ್ಲಿ ಆಶಿಶ್‌ ಷಾ ಮತ್ತು ಅಂಬರೀಶ್‌ ಮೂರ್ತಿ ಜೊತೆ ಸೇರಿ ‘ಪೆಪ್ಪರ್‌ಫ್ರೈ’ ಎಂಬ ಕಂಪನಿ ಸ್ಥಾಪಿಸಿದ್ದರು. ಆನ್‌ಲೈನ್‌ ಮಾರುಕಟ್ಟೆ ಮೂಲಕ ಪೀಠೋಪಕರಣಗಳು ಮತ್ತು ಗೃಹಲಂಕಾರ ವಸ್ತುಗಳನ್ನು ಮಾರಾಟ ಮಾಡುವ ವಹಿವಾಟು ಪ್ರಾರಂಭಿಸಿದ್ದರು. ಕಂಪನಿಯ ಸಿಇಓ ಆಗಿಯೂ ಅಂಬರೀಶ್ ಕಾರ್ಯನಿರ್ವಹಿಸಿದ್ದಾರೆ.

500 ದಶಲಕ್ಷ ಅಮೆರಿಕನ್‌ ಡಾಲರ್‌ ಮೌಲ್ಯದ ‘ಪೆಪ್ಪರ್‌ಫ್ರೈ’ ಕಂಪೆನಿಗೆ 2020ರಲ್ಲಿ ಗೋಲ್ಡ್‌ಮನ್ ಸ್ಯಾಚ್ಸ್ , ಬರ್ಟೆಲ್ಸ್‌ಮನ್ ಇಂಡಿಯಾ ಸಹಿತ ಹಲವು ಕಂಪೆನಿಗಳಿಂದ 244 ದಶಲಕ್ಷ ಅಮೆರಿಕನ್ ಡಾಲರ್‌ ಹೂಡಿಕೆ ಹರಿದುಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT