ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಲೀಲಾ ಮೈದಾನಕ್ಕೆ ವಾಜಪೇಯಿ ಹೆಸರು?

ಬಿಜೆಪಿಯ ಪ್ರಯತ್ನಕ್ಕೆ ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ ಕಿಡಿ
Last Updated 25 ಆಗಸ್ಟ್ 2018, 18:19 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚೆಗೆ ನಿಧನಹೊಂದಿದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರನ್ನು ದೇಶದ ರಾಜಧಾನಿಯ ಐತಿಹಾಸಿಕ ರಾಮಲೀಲಾ ಮೈದಾನಕ್ಕೆ ಮರು ನಾಮಕರಣ ಮಾಡಲು ಬಿಜೆಪಿ ನೇತೃತ್ವದ ಸ್ಥಳೀಯ ಮಹಾನಗರ ಪಾಲಿಕೆ ಆಡಳಿತ ಮುಂದಾಗಿದೆ.

ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದೆ.

ಉತ್ತರ ದೆಹಲಿ ಮಹಾನಗರ ಪಾಲಿಕೆಯು (ಎನ್‌ಡಿಎಂಸಿ) ಮೈದಾನದ ಮರುನಾಮಕರಣ ಪ್ರಸ್ತಾವವನ್ನು ಆಗಸ್ಟ್‌ 30ರಂದು ನಡೆಯುವ ಸಭೆಯ ಮುಂದಿಡಲು ಸಿದ್ಧತೆ ಮಾಡಿಕೊಂಡಿದೆ. ವಿಶೇಷ ನಿಯಮದಡಿ ಈ ಪ್ರಸ್ತಾವ ಚರ್ಚೆಗೆ ಬರುವಂತೆ ಮಾಡಲು ಬಿಜೆಪಿ ಹಿರಿಯ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯ ಈ ನಡೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಗೇಲಿ ಮಾಡಿದ್ದು, ‘ಇಂತಹ ಗಿಮಿಕ್‌ಗಳು ಓಟುಗಳನ್ನು ತಂದುಕೊಡುವುದಿಲ್ಲ’ ಎಂದು ಕುಟುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ, ‘ಮತ ಗಳಿಸಬೇಕೆಂದರೆ ಬಿಜೆಪಿಯು ಪ್ರಧಾನಿ ಹೆಸರನ್ನು ಬದಲಿಸುವ ಅಗತ್ಯವಿದೆ’ ಎಂದಿದ್ದಾರೆ.

ಮೈದಾನದ ಹೆಸರು ಬದಲಾವಣೆಯ ಪ್ರಸ್ತಾವವನ್ನು ಪಾಲಿಕೆ ಮೇಯರ್ ಆದೇಶ್ ಗುಪ್ತಾ ತಳ್ಳಿ ಹಾಕಿದ್ದಾರೆ.

‘ತುರ್ತು ಪರಿಸ್ಥಿತಿಗೂ ಮೊದಲು ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಜೈಪ್ರಕಾಶ್‌ ನಾರಾಯಣ್‌ ಅವರು ನಡೆಸಿದ ಐತಿಹಾಸಿಕ ಭಾಷಣ, ಅಣ್ಣಾ ಹಜಾರೆ ಅವರ ಭ್ರಷ್ಟಾಚಾರದ ವಿರೋಧಿ ಆಂದೋಲನ ಸೇರಿ ಹಲವು ಹೋರಾಟಗಳಿಗೆ ರಾಮಲೀಲಾ ಮೈದಾನ ವೇದಿಕೆ ಒದಗಿಸಿದೆ. ಯಾವುದೇ ಕಾರಣಕ್ಕೂ ಮೈದಾನದ ಹೆಸರು ಬದಲಿಸುವುದಿಲ್ಲ’ ಎಂದು ಅವರು ಸಷ್ಟಪಡಿಸಿದ್ದಾರೆ.

ವಾಜಪೇಯಿ ಅವರ ಸೋದರನ ಪುತ್ರಿ ಕರುಣಾ ಶುಕ್ಲಾ ಅವರು, ‘ವಾಜಪೇಯಿ ಅವರ ಸಾವನ್ನು ಬಿಜೆಪಿಯು ತನ್ನ ರಾಜಕೀಯ ಲಾಭ‌ಕ್ಕಾಗಿ ಬಳಸಿಕೊಳ್ಳುತ್ತಿದೆ’ ಎಂದು ಟೀಕಿಸಿದ್ದರು.

ವಾಜಪೇಯಿ ಅವರ ಚಿತಾಭಸ್ಮವನ್ನು ಹಿಡಿದು ದೇಶದಾದ್ಯಂತ ಯಾತ್ರೆ ಹೊರಡುವ ಮೂಲಕ ಬಿಜೆಪಿಯು, ಅವರ ಸಾವನ್ನು ರಾಜಕೀಯಗೊಳಿಸುತ್ತಿದೆ ಎಂದು ಕಾಂಗ್ರೆಸ್‌ ಕೂಡ ವಾಗ್ದಾಳಿ ಮಾಡಿದೆ.

*****

‘ಮರ್ಯಾದಾ ಪುರುಷೋತ್ತಮ’ ಶ್ರೀರಾಮನನ್ನು ಎಲ್ಲರೂ ಆರಾಧಿಸುತ್ತೇವೆ. ರಾಮಲೀಲಾ ಮೈದಾನದ ಹೆಸರು ಮರುನಾಮಕರಣದ ಪ್ರಶ್ನೆಯೇ ಇಲ್ಲ. ಕೆಲವರು ಉದ್ದೇಶಪೂರ್ವಕ ಸುಳ್ಳು ಸುದ್ದಿ ಹರಡಲು ಯತ್ನಿಸುತ್ತಿದ್ದಾರೆ
ಮನೋಜ್‌ ತಿವಾರಿ, ದೆಹಲಿ ಬಿಜೆಪಿ ಅಧ್ಯಕ್ಷ

ಬಿಜೆಪಿಯು ತನ್ನ ರಾಜಕೀಯ ಉದ್ದೇಶಗಳಿಗಾಗಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸ್ಮರಣೆಯನ್ನು ಬಳಸಿಕೊಳ್ಳುತ್ತಿರುವುದು ಅತ್ಯಂತ ಖಂಡನೀಯ
– ಅಶೋಕ್ ಗೆಹ್ಲೋಟ್, ಎಐಸಿಸಿ ಪ್ರಧಾನ ಕಾರ್ಯದರ್ಶಿ

ಪ್ರಧಾನಿ ಹೆಸರಿಗೆ ಒಂದೇ ಒಂದು ಓಟು ಸಿಗುವುದಿಲ್ಲ. ಬಿಜೆಪಿಯು ಪ್ರಧಾನಿಯ ಹೆಸರು ಮರುನಾಮಕರಣ ಮಾಡಲಿ. ಇದರಿಂದಾದರೂ ಅವರಿಗೆ ಕೆಲವು ಮತಗಳು ಸಿಗಬಹುದು
–ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT