ನವದೆಹಲಿ: ಹವಾಗುಣ ಸಹಿಷ್ಣು ಗುಣವಿರುವ ಹಾಗೂ ಪೌಷ್ಟಿಕಾಂಶ ಹೆಚ್ಚಿಸಲಾಗಿರುವ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ 109 ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡಿದರು.
ಭಾರತೀಯ ಕೃಷಿ ಸಂಶೋಧನಾ ಪರಿಷತ್ತು (ಐಸಿಎಆರ್) ಈ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಇಲ್ಲಿನ ಪೂಸಾದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ(ಐಎಆರ್‌ಐ) ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಈ ತಳಿಗಳನ್ನು ಬಿಡುಗಡೆ ಮಾಡಿದರು ಎಂದು ಪ್ರಕಟಣೆ ತಿಳಿಸಿದೆ.
34 ಕೃಷಿ ಬೆಳೆಗಳು ಹಾಗೂ 27 ತೋಟಗಾರಿಕೆ ಬೆಳೆಗಳು ಸೇರಿದಂತೆ ಒಟ್ಟು 61 ಬೆಳೆಗಳಿಗೆ ಸಂಬಂಧಿಸಿದ ತಳಿಗಳನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ತಳಿಗಳಿಂದ ಅಧಿಕ ಇಳುವರಿ ಸಾಧ್ಯವಾಗಲಿದೆ. ಆ ಮೂಲಕ ರೈತರ ಆದಾಯ ಹೆಚ್ಚಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸಿರಿಧಾನ್ಯಗಳು, ಎಣ್ಣೆ ಕಾಳುಗಳು, ಬೇಳೆಕಾಳುಗಳು, ಕಬ್ಬು, ಹತ್ತಿ, ಹಣ್ಣುಗಳು, ತರಕಾರಿಗಳು, ಪ್ಲಾಂಟೇಷನ್ ಬೆಳೆಗಳು, ಸಂಬಾರ್ ಪದಾರ್ಥಗಳು, ಹೂವು ಹಾಗೂ ಔಷಧೀಯ ಸಸ್ಯಗಳಿಗೆ ಸಂಬಂಧಿಸಿದ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಸಂವಾದ: ಇದೇ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ರೈತರು ಹಾಗೂ ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು. ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿರುವ ವಿಜ್ಞಾನಿಗಳ ಕಾರ್ಯವನ್ನು ಶ್ಲಾಘಿಸಿದರು.
‘ನೈಸರ್ಗಿಕ ಕೃಷಿಯಿಂದ ಲಾಭ ಹೆಚ್ಚು. ಜನರಲ್ಲಿ ಕೂಡ ಸಾವಯವ ಕೃಷಿ ಮತ್ತು ಆಹಾರ ಕುರಿತು ಒಲವು ಹೆಚ್ಚುತ್ತಿದೆ ಎಂಬುದಾಗಿ ಮೋದಿ ಹೇಳಿದರು’ ಎಂದು ಪ್ರಕಟಣೆ ತಿಳಿಸಿದೆ.
‘ಈ ತಳಿಗಳು ಹಾಗೂ ನೈಸರ್ಗಿಕ ಕೃಷಿ ಕುರಿತು ರೈತರಲ್ಲಿ ಅರಿವು ಮೂಡಿಸುವಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ) ವಹಿಸುತ್ತಿರುವ ಪಾತ್ರವನ್ನು ಶ್ಲಾಘಿಸಿದರು’ ಎಂದೂ ಪ್ರಕಟಣೆ ತಿಳಿಸಿದೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ ಪಾಲ್ಗೊಂಡಿದ್ದರು.
ನೂತನ ತಳಿಗಳ ಕುರಿತು ಐಎಆರ್‌ಐ ವಿಜ್ಞಾನಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದರು
– ಪಿಟಿಐ ಚಿತ್ರ
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿರುವ 109 ಹವಾಗುಣ ಸಹಿಷ್ಣು ಗುಣವಿರುವ ತಳಿಗಳಲ್ಲಿ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಅಭಿವೃದ್ಧಿಪಡಿಸಿರುವ ಅರ್ಕ ಹೆಸರಿನ 13 ಹಣ್ಣು ತರಕಾರಿ ಹೂವು ಮತ್ತು ಔಷಧೀಯ ಬೆಳೆಗಳ ತಳಿಗಳು ಸೇರಿವೆ.
ತಳಿಗಳ ವಿವರ: ಅರ್ಕ ಉದಯ (ಮಾವು) ಅರ್ಕ ಕಿರಣ್ (ಪೇರಲ) ಅರ್ಕ ಚಂದ್ರ(ಚಕೋತ) ಅರ್ಕ ನಿಕಿತಾ(ಬೆಂಡೆ) ಅರ್ಕ ವಿಸ್ತಾರ (ಚಪ್ಪರದ ಅವರೆ) ಅರ್ಕ ವೈಭವ (ಸುಗಂದರಾಜ ಹೂವು) ಅರ್ಕ ಶ್ರೀಯಾ(ಕನಕಾಂಬರ) ಅರ್ಕ ಅಮರ್ ಮತ್ತು ಅರ್ಕ ಆಯುಷ್ ಪ್ಯುಸಾರಿಯಂ(ಗ್ಲಾಡಿಯೋಲಸ್) ಅರ್ಕಾ ಧ್ವನಂತರಿ ಮತ್ತು ಅರ್ಕಾ ದಕ್ಷ(ವೆಲ್ವೆಟ್ ಬೀನ್ಸ್) ಅರ್ಕಾ ಅಶ್ವಗಂಧ ಮತ್ತು ಅರ್ಕಾ ಪ್ರಭಾವಿ(ಒಂದೆಲಗ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.