ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಯೋಧ್ಯೆಗೆ ಭೇಟಿ ನೀಡಲಿರುವ ಪ್ರಧಾನಿ: 15 ಸಾವಿರ ಕೋಟಿ ಯೋಜನೆಗಳಿಗೆ ಶಂಕುಸ್ಥಾಪನೆ

ಅಯೋಧ್ಯೆಗೆ ಇಂದು ಪ್ರಧಾನಿ ಮೋದಿ ಭೇಟಿ–‌ವಿಮಾನ ನಿಲ್ದಾಣ ಉದ್ಘಾಟನೆ ಸೇರಿದಂತೆ ಬಹುಕೋಟಿ ಯೋಜನೆಗಳಿಗೆ ಚಾಲನೆ
Published 30 ಡಿಸೆಂಬರ್ 2023, 2:29 IST
Last Updated 30 ಡಿಸೆಂಬರ್ 2023, 2:29 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಆಯೋಧ್ಯೆಗೆ ಭೇಟಿ ನೀಡಲಿದ್ದು, ಹೊಸದಾಗಿ ನಿರ್ಮಿಸಲಾದ ಅಯೋಧ್ಯೆ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.

ಪ್ರಧಾನಿ ಅವರು ಶನಿವಾರ(ಇಂದು) 11:15ಕ್ಕೆ ಪುನರಾಭಿವೃದ್ಧಿಗೊಂಡ ಅಯೋಧ್ಯೆಗೆ ತಲುಪಲಿದ್ದಾರೆ. ಆರಂಭದಲ್ಲಿ ಹೊಸ ಅಮೃತ್ ಭಾರತ್ ರೈಲುಗಳು ಮತ್ತು ವಂದೇ ಭಾರತ್ ರೈಲುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅಲ್ಲದೇ ಇನ್ನೂ ಹಲವಾರು ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 12:15ರ ಸುಮಾರಿಗೆ ಮೋದಿ ಅವರು, ಹೊಸದಾಗಿ ನಿರ್ಮಿಸಲಾದ ಅಯೋಧ್ಯೆ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅಲ್ಲಿ ಅವರು ₹15 ಸಾವಿರ ಕೋಟಿಗಿಂತ ಹೆಚ್ಚಿನ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವುಗಳಲ್ಲಿ ಅಯೋಧ್ಯೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಸುಮಾರು ₹11,100 ಕೋಟಿ ಯೋಜನೆಗಳು ಮತ್ತು ಉತ್ತರ ಪ್ರದೇಶದಾದ್ಯಂತ ಇತರ ಯೋಜನೆಗಳಿಗೆ ಸಂಬಂಧಿಸಿದ ಸುಮಾರು ₹4600 ಕೋಟಿ ಯೋಜನೆಗಳು ಸೇರಿವೆ.

‘ನಮ್ಮ ಸರ್ಕಾರ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ಸಂಪರ್ಕವನ್ನು ಸುಧಾರಿಸಲು ಹಾಗೂ ಭಗವಾನ್ ಶ್ರೀರಾಮನ ನಗರವಾದ ಅಯೋಧ್ಯೆಯ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ನಿರ್ಧರಿಸಿದೆ. ಈ ದಿಸೆಯಲ್ಲಿ ನಾನು ನೂತನವಾಗಿ ನಿರ್ಮಿಸಲಾದ ವಿಮಾನ ನಿಲ್ದಾಣ, ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದೇನೆ. ಇದರೊಂದಿಗೆ ಇನ್ನೂ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದೇನೆ. ಈ ಯೋಜನೆಗಳು ಅಯೋಧ್ಯೆ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ನನ್ನ ಕುಟುಂಬ ಸದಸ್ಯರ ಬದುಕನ್ನು ಹಸನಗೊಳಿಸುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ವಧುವಿನಂತೆ ಸಿಂಗಾರಗೊಂಡ ವಿಮಾನ ನಿಲ್ದಾಣ:

ಇಂದು ಉದ್ಘಾಟನೆಗೊಳ್ಳಲಿರುವ ಅಯೋಧ್ಯೆ ವಿಮಾನ ನಿಲ್ದಾಣವನ್ನು ವಧುವಿನಂತೆ ಸಿಂಗರಿಸಲಾಗಿದೆ. ಅತ್ಯಾಧುನಿಕ ವಿಮಾನ ನಿಲ್ದಾಣವನ್ನು ₹1450 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ 6500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸುಸಜ್ಜಿತವಾಗಿದೆ.

ಟರ್ಮಿನಲ್ ಕಟ್ಟಡದ ಮುಂಭಾಗ ಅಯೋಧ್ಯೆಯಲ್ಲಿರುವ ರಾಮ ಮಂದಿರದ ದೇವಾಲಯದ ವಾಸ್ತುಶಿಲ್ಪವನ್ನು ಚಿತ್ರಿಸುತ್ತದೆ. ಟರ್ಮಿನಲ್ ಕಟ್ಟಡದ ಒಳಭಾಗವನ್ನು ಭಗವಾನ್ ಶ್ರೀರಾಮನ ಜೀವನವನ್ನು ಚಿತ್ರಿಸುವ ಸ್ಥಳೀಯ ಕಲೆ, ವರ್ಣಚಿತ್ರಗಳು ಮತ್ತು ಭಿತ್ತಿಚಿತ್ರಗಳಿಂದ ಅಲಂಕರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT