ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿಗಳ ಸಾಲ ಮನ್ನಾ ಮಾಡಿದ ಮೋದಿ, ಪ್ರವಾಹ ನಿರ್ವಹಣೆಗೆ ಹಣ ನೀಡಲಿಲ್ಲ: ರಾಹುಲ್

Published 26 ಮೇ 2024, 13:33 IST
Last Updated 26 ಮೇ 2024, 13:33 IST
ಅಕ್ಷರ ಗಾತ್ರ

ಶಿಮ್ಲಾ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 10 ವರ್ಷಗಳ ಆಡಳಿತಾವಧಿಯಲ್ಲಿ 22 ಮಂದಿ ಕೈಗಾರಿಕೋದ್ಯಮಿಗಳ ಸುಮಾರು ₹16 ಲಕ್ಷ ಕೋಟಿ ಮೊತ್ತದ ಸಾಲವನ್ನು ಮನ್ನಾ ಮಾಡಿದ್ದಾರೆ. ಆದರೆ, ಕಳೆದ ವರ್ಷ ಹಿಮಾಚಲ ಪ್ರದೇಶದಲ್ಲಿ ಮುಂಗಾರು ಮಳೆಯಿಂದ ಉಂಟಾದ ಹಾನಿಯ ನಿರ್ವಹಣೆಗೆ ₹9 ಸಾವಿರ ಕೋಟಿ ನೀಡಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಸಿರ್ಮೌರ್‌ ಜಿಲ್ಲೆಯ ನಹಾನ್‌ನಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮೋದಿ ಅಧಿಕಾರಕ್ಕೆ ಬಂದಾಗಲೆಲ್ಲ ಅದಾನಿ ಷೇರುಗಳ ಬೆಲೆ ಏರುತ್ತದೆ. ಈ ಸರ್ಕಾರ 22 ಜನರ ಕನಸುಗಳನ್ನು ಮಾತ್ರ ಪೂರೈಸುತ್ತಿದೆ. ದೇಶದ ಜನರು ಮೂಕ ಪ್ರೇಕ್ಷಕರಾಗಿದ್ದಾರೆ’ ಎಂದು ಗುಡುಗಿದ್ದಾರೆ.

ಸೇಬು ಬೆಲೆಗಳನ್ನು ನಿಯಂತ್ರಿಸಲು ಮತ್ತು ಎಲ್ಲ ಶೀತಲೀಕರಣ ಘಟಕಗಳನ್ನು ಮೋದಿ ಒಬ್ಬ ವ್ಯಕ್ತಿಗೆ ನೀಡಿದ್ದಾರೆ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಎಲ್ಲ ಶೀತಲೀಕರಣ ಘಟಕಗಳು ಮತ್ತು ಸೇಬು ಮಾರಾಟ ಮಳಿಗೆಗಳನ್ನು ಉದ್ಯಮಿ ಗೌತಮ್ ಅದಾನಿಗೆ ನೀಡಿರುವುದನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷರು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ಹಿಮಾಚಲ ಪ್ರದೇಶ ಸರ್ಕಾರವು ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ನೀಡಿರುವ ಪರಿಹಾರವನ್ನು ಸರಿಯಾಗಿ ವಿತರಿಸಿಲ್ಲ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು ಮತ್ತು ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈ ಹೇಳಿಕೆ ಬಂದ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರು ತಿರುಗೇಟು ನೀಡಿದ್ದಾರೆ.

ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯು ಹಿಮಾಚಲ ಪ್ರದೇಶದಲ್ಲಿ ಸುಮಾರು 550ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತು ಮತ್ತು ರಾಜ್ಯದ ಬಹುತೇಕ ಕಡೆಗಳಲ್ಲಿ ಆಸ್ತಿ–ಪಾಸ್ತಿ ಹಾನಿಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT