ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಎಸ್‌ಯು ಪ್ರತಿಭಟನೆ | ಮಹಿಳೆಯರೊಂದಿಗೆ ಅನುಚಿತ ವರ್ತನೆ: ಆರೋಪ

Published 19 ಜೂನ್ 2024, 14:28 IST
Last Updated 19 ಜೂನ್ 2024, 14:28 IST
ಅಕ್ಷರ ಗಾತ್ರ

ಕಣ್ಣೂರು/ ಪಾಲಕ್ಕಾಡ್‌: ರಾಜ್ಯದ ಮಲಬಾರ್‌ ಪ್ರಾಂತ್ಯದ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿಗಳಲ್ಲಿ ಕಡಿಮೆ ಸೀಟು ನಿಗದಿಗೊಳಿಸಿದೆ ಎಂದು ಆರೋಪಿಸಿ ಕೇರಳ ವಿದ್ಯಾರ್ಥಿಗಳ ಒಕ್ಕೂಟವು (ಕೆಎಸ್‌ಯು) ಬುಧವಾರ ಕಣ್ಣೂರು, ಪಾಲಕ್ಕಾಡ್‌ ಜಿಲ್ಲೆಗಳಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಚಳವಳಿಗಾರರ ಮೇಲೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಲ್ಲದೆ, ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ.

ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಪ್ರಥಮ ಪಿಯುಸಿ ಸೀಟು ಸಿಗುವ ಕುರಿತು ಆತಂಕಕ್ಕೆ ಒಳಗಾಗಿದ್ದ ಪಾರಪ್ಪನಂಗಡಿಯ ವಿದ್ಯಾರ್ಥಿಯೊಬ್ಬಳು ಇದೇ ಜೂನ್‌ 11ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದಾದ ಬಳಿಕ ಎಡಪಂಥೀಯ ಮೈತ್ರಿ ಸರ್ಕಾರವು ತೀವ್ರ ಟೀಕೆಗೆ ಗುರಿಯಾಗಿತ್ತು.

ಇದರ ಬೆನ್ನಲ್ಲೇ ಕೆಎಸ್‌ಯು ನೇತೃತ್ವದಲ್ಲಿ ಬುಧವಾರ ಕಣ್ಣೂರಿನ ಜಿಲ್ಲಾಧಿಕಾರಿ ಕಚೇರಿಗೆ ಬೃಹತ್‌ ಪಾದಯಾತ್ರೆ ನಡೆಸಿ, ಈಗಿರುವ ಕಾಲೇಜುಗಳಲ್ಲಿ ಹೆಚ್ಚಿನ ಸೀಟು ಲಭ್ಯತೆ ಇರುವಂತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಲಾಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ವಿರುದ್ಧ ಘೋಷಣೆ ಕೂಗುತ್ತಾ ಸಾಗುತ್ತಿದ್ದವರನ್ನು ಪೊಲೀಸರು ರಸ್ತೆಯ ಮಧ್ಯಭಾಗದಲ್ಲೇ ತಡೆದರು. ಇದರಿಂದ ಸುಮ್ಮನಾಗದ ಪ್ರತಿಭಟನಕಾರರು, ಸ್ಥಳದಲ್ಲೇ ಕೂತು ಧರಣಿ ಮುಂದುವರಿಸಿದರು. ಈ ವೇಳೆ ಪೊಲೀಸರು ಎರಡು ಬಾರಿ ಜಲಫಿರಂಗಿ ಬಳಸಿ, ಗುಂಪು ಚದುರಿಸಲು ಮುಂದಾದರು.

ಕೆಲವರು ಬ್ಯಾರಿಕೇಡ್‌ ದಾಟಲು ಮುಂದಾದರು. ಈ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.ಕೆಲವು ಮಹಿಳೆಯರನ್ನು ಬಲವಂತವಾಗಿ ರಸ್ತೆಗೆ ಎಳೆದರು.

‘ಈ ವೇಳೆ ನಮ್ಮ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ’ ಎಂದು ಕೆಎಸ್‌ಯು ಕಾರ್ಯಕರ್ತರು ಆರೋಪಿಸಿದರು. ಪಾಲಕ್ಕಾಡ್‌ನಲ್ಲಿ ನಡೆದ ಪ್ರತಿಭಟನೆಯಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿತ್ತು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT