ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ದೆಹಲಿ ಚಲೋ' ಹೋರಾಟ ರೈತರ ಹಿತಾಸಕ್ತಿಗಳಿಗೆ ಪೂರಕವಾಗಿಲ್ಲ: ಭಾರತೀಯ ಕಿಸಾನ್‌ ಸಂಘ

Published 14 ಫೆಬ್ರುವರಿ 2024, 11:29 IST
Last Updated 14 ಫೆಬ್ರುವರಿ 2024, 11:29 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ದೆಹಲಿ ಚಲೋ’ ಹೋರಾಟವು ರಾಜಕೀಯ ಪ್ರೇರಿತವಾಗಿರುವಂತೆ ಕಾಣುತ್ತಿದೆ ಎಂದು ಹೇಳಿರುವ ಭಾರತೀಯ ಕಿಸಾನ್‌ ಸಂಘ (ಬಿಕೆಎಸ್‌), ಈ ಹೋರಾಟಕ್ಕೆ ತನ್ನ ಬೆಂಬಲ ಇಲ್ಲ ಎಂದು ತಿಳಿಸಿದೆ. ಭಾರತೀಯ ಕಿಸಾನ್ ಸಂಘವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆ.

‘ದೆಹಲಿ ಚಲೋ’ ಹೋರಾಟವು ರೈತರ ಹಿತಾಸಕ್ತಿಗಳಿಗೆ ಪೂರಕವಾಗಿ ಇಲ್ಲ ಎಂದು ಬಿಕೆಎಸ್‌ ಹೇಳಿದೆ. ರೈತರು ಬೆಳೆದ ಬೆಳೆಗಳಿಗೆ ಉತ್ಪಾದನಾ ವೆಚ್ಚ ಆಧರಿಸಿ ಸೂಕ್ತ ಬೆಲೆ ಸಿಗಬೇಕು; ಆದರೆ, ಚುನಾವಣೆಯ ಮೇಲೆ ಕಣ್ಣಿಟ್ಟು ರೈತರ ಹೆಸರಿನಲ್ಲಿ ನಡೆಸುವ ‘ರಾಜಕೀಯ ಕುಟಿಲ ತಂತ್ರ’ವು ನಿಲ್ಲಬೇಕು ಎಂದು ಬಿಕೆಎಸ್ ಪ್ರಧಾನ ಕಾರ್ಯದರ್ಶಿ ಮೋಹಿನಿ ಮೋಹನ್ ಮಿಶ್ರಾ ಹೇಳಿಕೆ ನೀಡಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ‘ರಾಜಕೀಯ ಉದ್ದೇಶ’ದಿಂದ ರೈತರ ಹೆಸರಿನಲ್ಲಿ ಚಳವಳಿ ಆಯೋಜಿಸಿದಾಗ, ಅದರ ಬೆನ್ನಿಗೇ ಹಿಂಸೆ ಸೃಷ್ಟಿಯಾಗುತ್ತದೆ, ಗೊಂದಲದ ಪರಿಸ್ಥಿತಿ ಉಂಟಾಗುತ್ತದೆ ಹಾಗೂ ರಾಷ್ಟ್ರದ ಆಸ್ತಿಗೆ ಹಾನಿಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಇಂತಹ ಚಳವಳಿಗಳು ರೈತರ ಬಗ್ಗೆ ನಕಾರಾತ್ಮಕ ಭಾವನೆ ಮೂಡಲು ಕಾರಣವಾಗುತ್ತವೆ. ತಮ್ಮ ಜೀವನವನ್ನು ಉತ್ತಮಪಡಿಸಲು ಹೆಣಗುತ್ತಿರುವ ಕೃಷಿ ಕಾರ್ಮಿಕರು ಪರಿಣಾಮ ಅನುಭವಿಸಬೇಕಾಗುತ್ತದೆ ಮಿಶ್ರಾ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಈ ಕಾರಣಕ್ಕಾಗಿಯೇ ಭಾರತೀಯ ಕಿಸಾನ್ ಸಂಘವು ಹಿಂಸಾತ್ಮಕ ಹೋರಾಟಗಳನ್ನು ಬೆಂಬಲಿಸುವುದಿಲ್ಲ. ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಬಯಸುವವರು ಅದನ್ನು ಮುಂದುವರಿಸಬೇಕು; ಆದರೆ, ಅವರು ರೈತರ ಬಗ್ಗೆ ಸಮಾಜದಲ್ಲಿ ನಕಾರಾತ್ಮಕ ಭಾವನೆ ಮೂಡದಂತೆ ನೋಡಿಕೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ’ ಎಂದಿದ್ದಾರೆ.

‘ರೈತರ ಬೆಳೆಗೆ ಅವುಗಳಿಗೆ ಆಗುವ ವೆಚ್ಚದ ಆಧಾರದಲ್ಲಿ ಸೂಕ್ತ ಬೆಲೆ ಸಿಗಬೇಕು, ಕೃಷಿ ಚಟುವಟಿಕೆಗಳಲ್ಲಿ ಬಳಸುವ ಬೀಜ, ರಸಗೊಬ್ಬರದಂತಹ ಉತ್ಪನ್ನಗಳಿಗೆ ಜಿಎಸ್‌ಟಿ ಇರಬಾರದು, ಕಿಸಾನ್ ಸಮ್ಮಾನ್ ನಿಧಿ ಮೊತ್ತವನ್ನು ಹೆಚ್ಚಿಸಬೇಕು, ಕುಲಾಂತರಿ ಬೀಜಗಳಿಗೆ ಅವಕಾಶ ಇರಕೂಡದು ಎಂಬುದು ನಮ್ಮ ಬೇಡಿಕೆ’ ಎಂದು ಬಿಕೆಎಸ್ ಹೇಳಿದೆ.

ರೈತರ ಹೆಸರಿನಲ್ಲಿ ರಾಜಕೀಯ ಚಳವಳಿಯನ್ನು ನಡೆಸಿದರೆ ನಷ್ಟ ಆಗುವುದು ರೈತರಿಗೆ ಎಂದು ಬಿಕೆಎಸ್ ಎಚ್ಚರಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT