ಬುಲಂದ್‌ಶಹರ್ (ಉತ್ತರ ಪ್ರದೇಶ): ಇಲ್ಲಿನ ಗಜರೌಲಾ ಗ್ರಾಮದಲ್ಲಿ ಗಂಗಾ ನದಿ ಮೇಲೆ ನಿರ್ಮಿಸಲಾಗುತ್ತಿದ್ದ ಸೇತುವೆಯು ಭಾಗಶಃ ಕುಸಿದುಬಿದ್ದಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.
ಘಟನೆ ಬಗ್ಗೆ ತನಿಖೆ ನಡೆಸಲು ಮುಖ್ಯ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಚಂದ್ರ ಪ್ರಕಾಶ್ ಸಿಂಗ್ ತಿಳಿಸಿದರು.
ಶುಕ್ರವಾರ ರಾತ್ರಿ 11 ಗಂಟೆ ನಂತರ ಹವಾಮಾನ ವೈಪರಿತ್ಯದಿಂದಾಗಿ ಮೂರು ಸ್ಲ್ಯಾಬ್‌ಗಳಿಗೆ ಹಾನಿಯಾಗಿದೆ. ಘಟನೆ ವೇಳೆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ದುರಂತ ತಪ್ಪಿದೆ ಎಂದರು.
ಅಮರೋಹ ಮತ್ತು ಬುಲಂದ್‌ಶಹರ್ ನಡುವೆ ಸಂಪರ್ಕ ಕಲ್ಪಿಸಲು ಗಂಗಾ ನದಿ ಮೇಲೆ ಸೇತುವೆ ನಿರ್ಮಿಸಲಾಗುತ್ತಿತ್ತು ಎಂದು ಹೇಳಿದರು.
ಘಟನೆ ವಿಚಾರವಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಬಿಜೆಪಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ‘ಸರ್ಕಾರವು ಯೋಜನೆಗಳ ಗುಣಮಟ್ಟದೊಂದಿಗೆ ರಾಜಿ ಆಗುವ ಮೂಲಕ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ’ ಎಂದು ಆರೋಪಿಸಿದರು.