ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಂದ ನೂತನ ಸಂಸತ್ ಭವನ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವಾಗತಿಸಿದ್ದಾರೆ. ಇದು ಇಡೀ ದೇಶಕ್ಕೆ ಹೆಮ್ಮೆಯ ಮತ್ತು ಅತ್ಯಂತ ಸಂತಸದ ವಿಷಯ ಎಂದು ಅವರು ಹೇಳಿದ್ದಾರೆ.
ನೂತನ ಸಂಸತ್ ಭವನ ಉದ್ಘಾಟನೆ ಬಗ್ಗೆ ಸಂದೇಶ ನೀಡಿರುವ ಅವರು, ‘ನೂತನ ಸಂಸತ್ ಭವನದ ಕಟ್ಟಡ ಉದ್ಘಾಟನೆಯನ್ನು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು’ ಎಂದು ಹೇಳಿದ್ದಾರೆ.
‘ಹೊಸ ಸಂಸತ್ ಭವನದ ಕಟ್ಟಡ ಉದ್ಘಾಟನೆ ಇಡೀ ದೇಶಕ್ಕೆ ಹೆಮ್ಮೆ ಮತ್ತು ಸಂತಸದ ವಿಷಯವಾಗಿದೆ’ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಮುರ್ಮು ಅವರ ಸಂದೇಶವನ್ನು ರಾಜಸಭೆಯ ಉಪಸಭಾಪತಿ ಹರಿವಂಶ್ ಸದನದಲ್ಲಿ ಓದಿದರು.
ಸಂಸತ್ ದೇಶಕ್ಕೆ ದಾರಿದೀಪ. ಹೊಸ ಭವನದ ಉದ್ಘಾಟನೆ ನಮ್ಮ ಜನತಂತ್ರದ ಪಯಣದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದೂ ಮುರ್ಮು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್ ಭವನವನ್ನು ಉದ್ಘಾಟಿಸಿದರು.
ರಾಷ್ಟ್ರಪತಿಯವರೇ ಸಂಸತ್ತಿನ ಮುಖ್ಯಸ್ಥರು. ಹಾಗಾಗಿ, ಅವರೇ ಸಂಸತ್ ಭವನವನ್ನು ಉದ್ಘಾಟಿಸಬೇಕು ಎಂದು ಒತ್ತಾಯಿಸಿದ್ದ ಹಲವು ವಿಪಕ್ಷಗಳು, ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದವು.