ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಜಂ ಖಾನ್ ಕ್ಷಮೆಗೆ ಹೆಚ್ಚಿದ ಒತ್ತಡ

ಸಂಸದೆ ರಮಾದೇವಿ ವಿರುದ್ಧ ಎಸ್‌ಪಿ ಸಂಸದನ ಆಕ್ಷೇಪಾರ್ಹ ಮಾತು
Last Updated 26 ಜುಲೈ 2019, 19:45 IST
ಅಕ್ಷರ ಗಾತ್ರ

ನವದೆಹಲಿ:ಲೋಕಸಭೆಯಲ್ಲಿ ಬಿಜೆಪಿ ಸಂಸದೆ ರಮಾದೇವಿ ಅವರ ವಿರುದ್ಧ ಆಕ್ಷೇಪಾರ್ಹ ಮತ್ತು ದ್ವಂದ್ವಾರ್ಥದ ಮಾತುಗಳಾಡಿದ್ದ ಸಮಾಜವಾದಿ ಪಕ್ಷದ ಸಂಸದ ಆಜಂ ಖಾನ್ ಅವರ ಕ್ಷಮೆಯಾಚನೆಗೆ ಎಲ್ಲ ಪಕ್ಷಗಳ ಸಂಸದರೂ ಪಟ್ಟು ಹಿಡಿದಿದ್ದಾರೆ. ಆಜಂ ಖಾನ್ ಅವರು ಕ್ಷಮೆ ಕೇಳದಿದ್ದರೆ, ಅವರ ವಿರುದ್ಧ ಸ್ಪೀಕರ್ ಓಂ ಬಿರ್ಲಾ ಅವರು ಕ್ರಮ ತೆಗೆದುಕೊಳ್ಳಲಿದ್ದಾರೆ.

ಗುರುವಾರ ‘ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ–2019’ರ ಮೇಲಿನ ಚರ್ಚೆಯ ವೇಳೆ ಆಜಂ ಖಾನ್ ಮತ್ತು ರಮಾದೇವಿ ನಡುವೆ ವಾಗ್ವಾದ ನಡೆದಿತ್ತು. ಆಗ ಆಜಂ ಅವರು ಆಕ್ಷೇಪಾರ್ಹವಾದ ಮಾತುಗಳನ್ನು ಆಡಿದ್ದರು. ಕಲಾಪದ ಕಡತದಿಂದ ಆ ಮಾತುಗಳನ್ನು ತೆಗೆದು ಹಾಕಲಾಗಿತ್ತು.

ಈ ಮಾತುಗಳಿಗೆ ಸಂಬಂಧಿಸಿದಂತೆ ಶುಕ್ರವಾರ ಲೋಕಸಭೆಯಲ್ಲಿ ಭಾರಿ ಚರ್ಚೆ ನಡೆಯಿತು. ಆಜಂ ಅವರ ಹೇಳಿಕೆಯಿಂದ ಮಹಿಳೆಯರಿಗೆ ಅವಮಾನವಾಗುತ್ತದೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮುಂದೆ ಯಾರೂ ಇಂತಹ ತಪ್ಪು ಮಾಡಬಾರದು ಎಂಬ ಸಂದೇಶ ರವಾನೆಯಾಗಬೇಕು ಎಂದು ಎಲ್ಲ ಪಕ್ಷಗಳ ಸದಸ್ಯರು ಒತ್ತಾಯಿಸಿದ್ದಾರೆ.

‘ಆಜಂ ಖಾನ್ ಅವರ ಮಾತನ್ನು ಇಡೀ ದೇಶವೇ ಕೇಳಿಸಿಕೊಂಡಿದೆ. ಈ ಹೇಳಿಕೆಯು ಎಲ್ಲಾ ಸಂಸದರಿಗೂ ಕಳಂಕ ತರುವಂತದ್ದು. ಈ ಹೇಳಿಕೆಯನ್ನು ಅಖಿಲೇಷ್ ಯಾದವ್ ಸಹ ಸಮರ್ಥಿಸಿಕೊಂಡರು’ ಎಂದು ಸಚಿವೆ ಸ್ಮೃತಿ ಇರಾನಿ ಕಿಡಿ ಕಾರಿದರು.

ಚರ್ಚೆಯ ವೇಳೆ ಆಜಂ ಖಾನ್ ಆಗಲೀ, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಆಗಲೀ ಸದನದಲ್ಲಿ ಹಾಜರು ಇರಲಿಲ್ಲ.

**

ರಮಾದೇವಿ ಅವರ ವಿರುದ್ಧ ಆಡಿರುವ ಮಾತುಗಳಿಗೆ ಅಜಂ ಖಾನ್ ಅವರು ಸದನದಲ್ಲಿ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಸ್ಪೀಕರ್ ಕ್ರಮ ತೆಗೆದುಕೊಳ್ಳಲಿದ್ದಾರೆ
- ಪ್ರಹ್ಲಾದ್ ಜೋಷಿ, ಸಂಸದೀಯ ವ್ಯವಹಾರಗಳ ಸಚಿವ

**

ಆಜಂ ಖಾನ್ ಅವರು ಕೇವಲ ಕ್ಷಮೆ ಕೇಳಿದರೆ ಸಾಲದು. ಈ ಲೋಕಸಭೆಯ ಅವಧಿ ಮುಗಿಯುವವರೆಗೂ ಅವರನ್ನು ಐದು ವರ್ಷ ಅಮಾನತಿನಲ್ಲಿ ಇರಿಸಬೇಕು
ರಮಾ ದೇವಿ, ಬಿಜೆಪಿ ಸಂಸದೆ

**

ಆಜಂ ಖಾನ್ ಅವರ ಹೇಳಿಕೆ ಆಕ್ಷೇಪಾರ್ಹವಾದುದು. ಸ್ಪೀಕರ್ ಅವರು ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸಿದ್ದೇನೆ
- ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆ

**

ಇದು ಅತ್ಯಂತ ನಾಚಿಕೆಗೇಡಿನ ವಿಷಯ. ಇಂತಹ ವರ್ತನೆಯನ್ನು ಸಹಿಸಿಕೊಳ್ಳಬಾರದು. ಇದರ ವಿರುದ್ಧ ಇಡೀ ಸದನ ಒಗ್ಗಟ್ಟಾಗಬೇಕು
- ಸುಪ್ರಿಯಾ ಸುಲೆ, ಎನ್‌ಸಿಪಿ ಸಂಸದೆ

**

ಸದನದ ಒಳಗೇ ಮಹಿಳೆಗೆ ಸಿಗುತ್ತಿರುವ ಬೆಲೆ ಮತ್ತು ರಕ್ಷಣೆ ಇಂಥಹದ್ದು. ಪರಿಸ್ಥಿತಿ ಹೀಗಿದ್ದ ಮೇಲೆ ಸದನದ ಹೊರಗೆ ಮಹಿಳೆಗೆ ಎಂತಹ ಗೌರವ ಸಿಗಬಹುದು?
- ಕನಿಮೊಳಿ, ಡಿಎಂಕೆ ಸಂಸದೆ

**

ಇದು ಅತ್ಯಂತ ಕರಾಳವಾದ ದಿನ. ಸದನದಲ್ಲೇ ಇಂತಹ ಮಾತು ಬಂದಿದೆ. ಇದರ ವಿರುದ್ಧ ಅತ್ಯಂತ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು
- ಬಿ.ಮಹ್ತಾಬ್, ಬಿಜೆಡಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT