ಕೋಲ್ಕತ್ತ: ಕೊಲೆಯಾದ ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಪ್ರೊ.ಸಂದೀಪ್ ಘೋಷ್ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ.
'ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ಮಾನಹಾನಿಯಾಗುತ್ತಿದೆ. ಸಂತ್ರಸ್ತ ವೈದ್ಯೆ ನನ್ನ ಮಗಳಿದ್ದಂತೆ. ಪೋಷಕನಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ. ಭವಿಷ್ಯದಲ್ಲಿ ಯಾರಿಗೂ ಹೀಗಾಗುವುದು ಬೇಡ' ಎಂದು ಹೇಳಿದ್ದಾರೆ. ಘೋಷ್ ಮಾತನಾಡುತ್ತಿರುವ ವಿಡಿಯೊವನ್ನು ಎಎನ್‌ಐ ಹಂಚಿಕೊಂಡು ವರದಿ ಮಾಡಿದೆ.
ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ವಿದ್ಯಾರ್ಥಿನಿಯ ಕೊಲೆಯಾಗಿತ್ತು. ವಿದ್ಯಾರ್ಥಿನಿಯನ್ನು ಕೊಲೆ ಮಾಡಿ, ನಂತರ ಅತ್ಯಾಚಾರವೆಸಗಿರುವ ಸಾಧ್ಯತೆ ಇದೆ ಎಂದು ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಹೇಳಿದ್ದಾರೆ. ಕೃತ್ಯದ ಸ್ವರೂಪದ ಖಚಿತತೆಗೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣ ಕುರಿತ ಮರಣೋತ್ತರ ಪರೀಕ್ಷೆಯ ಅಂತಿಮ ವರದಿಗಾಗಿ ಅವರು ಕಾಯುತ್ತಿದ್ದಾರೆ.
ಪ್ರಾಥಮಿಕ ಹಂತದ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢವಾಗಿದೆ.
ಆರೋಪಿ ಸಂಜಯ್ ರಾಯ್ ಎಂಬಾತನನ್ನು ಬಂಧಿಸಲಾಗಿದೆ. ನ್ಯಾಯಾಲಯ ಆತನನ್ನು, ಆಗಸ್ಟ್ 23ರವರೆಗೆ ಪೊಲೀಸರ ವಶಕ್ಕೆ ನೀಡಿದೆ.