ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂಸೆಗೆ ತಿರುಗಿದ ವಿದ್ಯಾರ್ಥಿಗಳ ಪ್ರತಿಭಟನೆ: ಬೂದಿ ಮುಚ್ಚಿದ ಕೆಂಡವಾದ ಮಣಿಪುರ

ಒಂದು ಜಿಲ್ಲೆಯಲ್ಲಿ ನಿಷೇಧಾಜ್ಞೆ; 15ರವರೆಗೆ ಇಂಟರ್‌ನೆಟ್‌ ಬಂದ್
Published : 10 ಸೆಪ್ಟೆಂಬರ್ 2024, 20:19 IST
Last Updated : 10 ಸೆಪ್ಟೆಂಬರ್ 2024, 20:19 IST
ಫಾಲೋ ಮಾಡಿ
Comments

ಇಂಫಾಲ್: ಸಂಘರ್ಷಪೀಡಿತ ಮಣಿಪುರದಲ್ಲಿ ಶಾಂತಿಸ್ಥಾಪನೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಹಿಂಸೆಗೆ ತಿರುಗಿದ ಬೆನ್ನಲ್ಲೇ ಮುಂಜಾಗ್ರತೆ ಕ್ರಮವಾಗಿ ರಾಜ್ಯದ 2 ಜಿಲ್ಲೆಗಳಲ್ಲಿ ಕರ್ಫ್ಯೂ, ಒಂದು ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.

ಅಲ್ಲದೆ, ರಾಜ್ಯದಾದ್ಯಂತ ಇಂಟರ್‌ನೆಟ್‌ ಸಂಪರ್ಕ ಸೇವೆಯನ್ನು 5 ದಿನ ಸ್ಥಗಿತಗೊಳಿಸಲಾಗಿದೆ. ಜಾಲತಾಣಗಳ ಮೂಲಕ ದ್ವೇಷ ಹರಡುವುದು, ಪ್ರತಿಭಟನೆ ಸಂಬಂಧಿತ ಚಿತ್ರಗಳ ಹಂಚಿಕೆಗೆ ತಡೆ, ದ್ವೇಷ ಭಾಷಣ, ವಿಡಿಯೊಗಳ ಹಂಚಿಕೆಗೆ ತಡೆಯೊಡ್ಡುವುದು ಇದರ ಉದ್ದೇಶ ವಾಗಿದೆ ಎಂದು ಗೃಹ ಇಲಾಖೆಯು ಈ ಕುರಿತ ಆದೇಶದಲ್ಲಿ ತಿಳಿಸಿದೆ.

ಮೊಬೈಲ್‌ ಫೋನ್‌ ಡಾಟಾ ಬಳಕೆ ಸೇರಿದಂತೆ ಎಲ್ಲ ರೀತಿಯ ಇಂಟರ್‌ನೆಟ್‌ ಸಂಪರ್ಕ ಸೇವೆಯನ್ನು ನಿರ್ಬಂಧಿಸಲಾಗಿದೆ ಈ ನಿರ್ಬಂಧವು ಸೆ.15ರ ಮಧ್ಯಾಹ್ನ 3 ಗಂಟೆಯವರೆಗೆ ಜಾರಿಯಲ್ಲಿರಲಿದೆ. 

ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಅನಿರ್ದಿಷ್ಟ ಅವಧಿವರೆಗೂ ಕರ್ಫ್ಯೂ ಜಾರಿಗೊಳಿಸಲಾಗಿದೆ. ನಿವಾಸಿಗಳಿಗೆ ಮನೆಯಿಂದ ಹೊರಗೆ ಬಾರದಂತೆಯೂ ನಿರ್ಬಂಧ ಹೇರಲಾಗಿದೆ. ತೌಬಾಲ್‌ ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ಹೇರಲಾಗಿದೆ.‌

‘ಕಾನೂನು ಸ್ಥಿತಿ ಹದಗೆಡುತ್ತಿರುವ ಹಾಗೂ ನಿಯಂತ್ರಣ ತಪ್ಪುತ್ತಿರುವ ಕಾರಣ ಮುಂದಿನ ಆದೇಶದವರೆಗೆ ಎರಡು ಜಿಲ್ಲೆಗಳಲ್ಲಿ ಪೂರ್ಣ ಕರ್ಫ್ಯೂ ಇರಲಿದೆ’ ಎಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.  

ನೂರಾರು ವಿದ್ಯಾರ್ಥಿಗಳು ಇಂಫಾಲ್‌ನ ಖ್ವೈರಾಂಬಾದ್‌ ಮಾರುಕಟ್ಟೆ ಆವರಣದಲ್ಲಿಯೇ ಸೋಮವಾರ ರಾತ್ರಿ ಬಿಡಾರ ಹೂಡಿದ್ದರು. ಸಮವಸ್ತ್ರದಲ್ಲಿದ್ದ ಈ ವಿದ್ಯಾರ್ಥಿಗಳಿಗೆ ಸ್ಥಳೀಯ ವರ್ತಕರೇ ರಾತ್ರಿ ವಾಸ್ತವ್ಯಕ್ಕೆ ನೆರವಾಗಿದ್ದರು.

ವಿದ್ಯಾರ್ಥಿಗಳ ಪ್ರತಿಭಟನೆ ಸೋಮವಾರ ಹಿಂಸೆಗೆ ತಿರುಗಲು ರಾಜ್ಯದಲ್ಲಿನ ದೀರ್ಘಕಾಲದ ಬಿಕ್ಕಟ್ಟಿನ ಕುರಿತು ಸಮುದಾಯದಲ್ಲಿದ್ದ ಆಕ್ರೋಶವೇ ಕಾರಣ ಎಂದು ವಿದ್ಯಾರ್ಥಿ ನಾಯಕರೊಬ್ಬರು ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಎನ್.ಬೀರೇನ್‌ ಸಿಂಗ್ ಮತ್ತು ರಾಜ್ಯಪಾಲ ಆಚಾರ್ಯ ಅವರನ್ನೂ ವಿದ್ಯಾರ್ಥಿಗಳು ಭೇಟಿಯಾಗಿದ್ದರು. ಡ್ರೋನ್‌, ಕ್ಷಿಪಣಿ ದಾಳಿ, ಈಚಿನ ಹಿಂಸಾಚಾರ ಕೃತ್ಯಗಳಲ್ಲಿ 8 ಮಂದಿ ಸತ್ತಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಡಿದ್ದಾರೆ. 

ರಾಜ್ಯದಲ್ಲಿ ಜನಾಂಗೀಯ ಘರ್ಷಣೆಯಿಂದಾಗಿ ಕಳೆದ ವರ್ಷದ ಮೇ ತಿಂಗಳಿನಿಂದ ಇಲ್ಲಿಯವರೆಗೂ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ಅತಂತ್ರರಾಗಿದ್ದಾರೆ.

ಮಣಿಪುರಕ್ಕೆ ಸಿಆರ್‌ಪಿಎಫ್‌ನ 2000 ಸಿಬ್ಬಂದಿ
ಜನಾಂಗೀಯ ಸಂಘರ್ಷ ಬಾಧಿತ ಮಣಿಪುರಕ್ಕೆ, ಸಿಆರ್‌ಪಿಎಫ್‌ನ 2000 ಸಿಬ್ಬಂದಿಯುಳ್ಳ ಎರಡು ತುಕಡಿಗಳನ್ನು ಕೇಂದ್ರ ಕಳುಹಿಸಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ. 58ನೇ ಸಂಖ್ಯೆಯ ತುಕಡಿಯು ತೆಲಂಗಾಣದ ವಾರಂಗಲ್‌ನಿಂದ, 112ನೇ ಸಂಖ್ಯೆಯ ತುಕಡಿಯನ್ನು ಜಾರ್ಖಂಡ್‌ನ ಲತೇಹರ್‌ನಿಂದ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. (ನವದೆಹಲಿ ವರದಿ):
‘ಅಶ್ರುವಾಯು ಶೆಲ್‌ ಪ್ರಯೋಗ’
ರಾಜಭವನಕ್ಕೆ ಜಾಥಾ ತೆರಳುತ್ತಿದ್ದ ವಿದ್ಯಾರ್ಥಿಗಳು, ಮಹಿಳೆಯರ ಗುಂಪು ಚದುರಿಸಲು ಪೊಲೀಸರು ಮಂಗಳವಾರ ಅಶ್ರುವಾಯು ಶೆಲ್‌ ಸಿಡಿಸಿದರು. ಡಿಜಿಪಿ ಮತ್ತು ಸರ್ಕಾರದ ಭದ್ರತಾ ಸಲಹೆಗಾರರ ಪದಚ್ಯುತಿಗೆ ಒತ್ತಾಯಿಸಲು ವಿದ್ಯಾರ್ಥಿಗಳು, ಮಹಿಳೆಯರು ರಾಜಭವನಕ್ಕೆ ಜಾಥಾ ತೆರಳುತ್ತಿದ್ದರು. ಮಣಿಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಪ್ರತ್ಯೇಕವಾಗಿ ರ‍್ಯಾಲಿ ನಡೆಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಗುಂಪು ಘರ್ಷಣೆ ಮಹಿಳೆ ಸಾವು
ಮಣಿಪುರದ ಕಂಗ್‌ಪೊಕ್ಪಿ ಜಿಲ್ಲೆ ತಾಂಗ್‌ಬುಹ್‌ ಗ್ರಾಮದಲ್ಲಿ ಎರಡು ಶಸ್ತ್ರಸಜ್ಜಿತ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಮಹಿಳೆ ಮೃತಪಟ್ಟಿದ್ದಾರೆ. ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಭಾನುವಾರ ರಾತ್ರಿ ಇದು ನಡೆದಿದೆ. ಮನೆಗಳಿಗೆ ಬೆಂಕಿ ಬಿದ್ದಂತೆಯೇ ಹಲರು ರಕ್ಷಣೆಗಾಗಿ ಸಮೀಪದ ಅರಣ್ಯ ಪ್ರದೇಶದತ್ತ ಓಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
‘ಅತ್ಯಾಧುನಿಕ ರಾಕೆಟ್‌ ಪತ್ತೆ’
ಮಣಿಪುರದಲ್ಲಿ ಡ್ರೋನ್‌, ಕ್ಷಿಪಣಿಗಳ ದಾಳಿ ಬಳಿಕ ಈಗ ಆಧುನಿಕ ರಾಕೆಟ್‌ಗಳು ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಳಿಯಲ್ಲಿ ಡ್ರೋನ್‌, ರಾಕೆಟ್‌ ಬಳಕೆಯಾಗಿಲ್ಲ ಎಂದು ನಿವೃತ್ತ ಡಿ.ಜಿ, ಲೆಫ್ಟಿನಂಟ್‌ ಜನರಲ್ ಪಿ.ಸಿ.ನಾಯರ್ ಅವರು ನೀಡಿದ್ದ ಹೇಳಿಕೆಯನ್ನು ಅಧಿಕಾರಿ ತಳ್ಳಿಹಾಕಿದ್ದಾರೆ. ಸುದ್ದಿಗಾರರ ಜೊತೆಗೆ ಮಾತನಾಡಿದ ಐಜಿಪಿ (ಆಡಳಿತ) ಕೆ.ಜಯಂತ ಸಿಂಗ್, ನಿವೃತ್ತ ಡಿಜಿ ಅವರದ್ದು ಅಪಕ್ವವಾದ ಹೇಳಿಕೆ. ಡ್ರೋನ್, ಕ್ಷಿಪಣಿ ದಾಳಿ ನಡೆದಿರುವುದಕ್ಕೆ ಸಾಕ್ಷ್ಯಗಳಿವೆ. ಡ್ರೋನ್‌ ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.
24 ಗಂಟೆ ಗಡುವು
‘ವಿದ್ಯಾರ್ಥಿ ಸಮುದಾಯದ ಆರು ಬೇಡಿಕೆಗಳ ಕುರಿತು ಪ್ರತಿಕ್ರಿಯಿಸಲು ರಾಜ್ಯಪಾಲ ಲಕ್ಷ್ಮಣನ್ ಪ್ರಸಾದ್ ಆಚಾರ್ಯ ಅವರಿಗೆ 24 ಗಂಟೆ ಗಡುವು ನೀಡಲಾಗಿದೆ. ಗಡುವು ಮುಗಿದ ಬಳಿಕ ಮುಂದಿನ ನಡೆ ನಿರ್ಧರಿಸುತ್ತೇವೆ’ ಎಂದು ವಿದ್ಯಾರ್ಥಿ ಮುಖಂಡ ವಿಕ್ಟರ್‌ ಸಿಂಗ್ ತಿಳಿಸಿದ್ದಾರೆ. ಡ್ರೋನ್‌, ಕ್ಷಿಪಣಿ ದಾಳಿ ನಡೆಸಿದವರ ವಿರುದ್ಧ ಕ್ರಮಜರುಗಿಸಬೇಕು, ಸಮಗ್ರ ರಕ್ಷಣೆ ಒದಗಿಸಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT