ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್ ನ್ಯಾಯಾಂಗ ಅಧಿಕಾರಿಗಳ ಬಡ್ತಿಗೆ ತಡೆ: ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ

Published 12 ಮೇ 2023, 19:37 IST
Last Updated 12 ಮೇ 2023, 19:37 IST
ಅಕ್ಷರ ಗಾತ್ರ

ನವದೆಹಲಿ/ಬೆಂಗಳೂರು: ಗುಜರಾತ್‌ನ 68 ನ್ಯಾಯಾಂಗ ಅಧಿಕಾರಿಗಳನ್ನು ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ನೀಡುವಂತೆ ಗುಜರಾತ್ ಹೈಕೋರ್ಟ್‌ ಮಾಡಿದ್ದ ಶಿಫಾರಸು ಮತ್ತು ಗುಜರಾತ್ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಪೀಠವು ಶುಕ್ರವಾರ ತಡೆ ನೀಡಿದೆ.

ಈ ಬಡ್ತಿ ಶಿಫಾರಸು ಮತ್ತು ಬಡ್ತಿ ಆದೇಶದ ವಿರುದ್ಧದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಪರಿಶೀಲಿಸಬೇಕು ಎಂದು ಪೀಠವು ತನ್ನ ಮಧ್ಯಂತರ ಆದೇಶದಲ್ಲಿ ಹೇಳಿದೆ.

ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ಅಪರಾಧ ನಿರ್ಣಯ ಮಾಡಿದ್ದ ಮತ್ತು ಎರಡು ವರ್ಷಗಳ ಜೈಲುಶಿಕ್ಷೆ ನೀಡಿ ತೀರ್ಪು ನೀಡಿದ್ದ ಸೂರತ್‌ನ ಮುಖ್ಯ ಮ್ಯಾಜಿಸ್ಟ್ರೇಟ್‌ ಹರೀಶ್ ಎಚ್‌. ವರ್ಮಾ ಅವರೂ ಈ ಬಡ್ತಿ ಪಟ್ಟಿಯಲ್ಲಿದ್ದರು. ಅವರ ಬಡ್ತಿಗೂ ಈ ತಡೆ ಆದೇಶ ಅನ್ವಯವಾಗಲಿದೆ.

68 ನ್ಯಾಯಾಂಗ ಅಧಿಕಾರಿಗಳನ್ನು ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ಮಾಡುವಂತೆ ಗುಜರಾತ್ ಹೈಕೋರ್ಟ್‌ ಶಿಫಾರಸು ಮಾಡಿತ್ತು. ಈ ಶಿಫಾರಸಿನ ವಿರುದ್ಧ ನ್ಯಾಯಾಂಗ ಅಧಿಕಾರಿಗಳಾದ ರವಿಕುಮಾರ್ ಮಹೇತಾ ಮತ್ತು ಸಚಿನ್ ಪ್ರತಾಪ್‌ರಾಯ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತ್ತು.

‘ಗುಜರಾತ್‌ ರಾಜ್ಯ ನ್ಯಾಯಾಂಗ ಸೇವಾ ನಿಯಮಗಳ ಪ್ರಕಾರ ನ್ಯಾಯಾಂಗ ಅಧಿಕಾರಿಗಳನ್ನು ಜಿಲ್ಲಾ ನ್ಯಾಯಾಧೀಶ ಹುದ್ದೆಗೆ ಪರಿಗಣಿಸುವಾಗ ‘ದಕ್ಷತೆ ಮತ್ತು ಜೇಷ್ಠತೆ’ಯ ಪರಿಗಣಿಸಬೇಕು. ಜತೆಗೆ ಆ ಅಧಿಕಾರಿಗಳು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಆದರೆ 68 ನ್ಯಾಯಾಂಗ ಅಧಿಕಾರಿಗಳನ್ನು ಬಡ್ತಿಗೆ ಆಯ್ಕೆ ಮಾಡುವಾಗ ‘ಜೇಷ್ಠತೆ ಮತ್ತು ದಕ್ಷತೆ’ಯ ಮಾದರಿಯನ್ನು ಅನುಸರಿಸಲಾಗಿದೆ. ಈ ಬಡ್ತಿ ಶಿಫಾರಸಿಗೆ ತಡೆ ನೀಡಬೇಕು’ ಎಂದು ಅವರು ಅರ್ಜಿಯಲ್ಲಿ ಕೋರಿದ್ದರು.

ಈ ಸಂಬಂಧ ವಿವರ ನೀಡುವಂತೆ ಗುಜರಾತ್ ಹೈಕೋರ್ಟ್‌ಗೆ ಮತ್ತು ಗುಜರಾತ್ ಸರ್ಕಾರಕ್ಕೆ ಪೀಠವು ಏಪ್ರಿಲ್‌ 13ರಂದು ನೋಟಿಸ್‌ ನೀಡಿತ್ತು. ಬಡ್ತಿ ಶಿಫಾರಸನ್ನು ಅನುಷ್ಠಾನಗೊಳಿಸಿ ಗುಜರಾತ್ ಸರ್ಕಾರವು ಏಪ್ರಿಲ್‌ 18ರಂದು ಆದೇಶ ಹೊರಡಿಸಿತ್ತು. ಏಪ್ರಿಲ್‌ 28ರಂದು ವಿಚಾರಣೆ ನಡೆಸಿದ್ದ ಪೀಠವು ಗುಜರಾತ್ ಸರ್ಕಾರದ ನಡೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ‘ಈ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿ ಇರುವಾಗ, ಅದನ್ನು ಮೀರಿ ಗುಜರಾತ್ ಸರ್ಕಾರ ಆದೇಶ ಹೊರಡಿಸಿದ್ದು ಸರಿಯಲ್ಲ’ ಎಂದು ಹೇಳಿತ್ತು.

ಈಗ ಪೀಠವು, ‘ಗುಜರಾತ್ ಹೈಕೋರ್ಟ್‌ನ ಬಡ್ತಿ ಶಿಫಾರಸು ಮತ್ತು ಗುಜರಾತ್ ಸರ್ಕಾರದ ಬಡ್ತಿ ಆದೇಶವು ಕಾನೂನುಬಾಹಿರ. ಈ ಬಡ್ತಿ ಪಟ್ಟಿಗೆ ತಡೆ ನೀಡಿದ್ದೇವೆ. ಈ ಪಟ್ಟಿಯಲ್ಲಿ ಬಡ್ತಿ ಪಡೆದವರನ್ನು, ಅವರು ಈ ಹಿಂದೆ ಇದ್ದ ಹುದ್ದೆಗಳಿಗೆ ವಾಪಸ್‌ ಕಳುಹಿಸಬೇಕು’ ಎಂದು ತಮ್ಮ ಮಧ್ಯಂತರ ತೀರ್ಪಿನಲ್ಲಿ ಸೂಚಿಸಿದೆ.

ಸಿಜೆಐ ಪೀಠಕ್ಕೆ ಅರ್ಜಿ

ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ನೇತೃತ್ವದ ಪೀಠವು ನಡೆಸಬೇಕು ಎಂದು ಪೀಠವು ತನ್ನ ಆದೇಶದಲ್ಲಿ ಹೇಳಿದೆ.

‘ವಿಷಯದ ಪ್ರಾಮುಖ್ಯತೆ ಮತ್ತು ನ್ಯಾಯಾಂಗ ಅಧಿಕಾರಗಳ ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಈ ಹಿಂದೆ ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ಪರಿಗಣಿಸಿದರೆ, ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ನಡೆಸುವುದು ಸೂಕ್ತ ಎನಿಸುತ್ತದೆ’ ಎಂದು ಪೀಠವು ತನ್ನ ಆದೇಶದಲ್ಲಿ ವಿವರಿಸಿದೆ.

ಗುಜರಾತ್‌ ರಾಜ್ಯ ನ್ಯಾಯಾಂಗ ಸೇವಾ ನಿಯಮಗಳ ಪ್ರಕಾರ ‘ದಕ್ಷತೆ ಮತ್ತು ಜೇಷ್ಠತೆ’ ಆಧಾರದಲ್ಲಿ ಬಡ್ತಿ ನೀಡಬೇಕಿತ್ತು. ಈ ಬಡ್ತಿಯು ಆ ನಿಯಮಗಳಿಗೆ ವಿರುದ್ಧವಾಗಿವೆ.
-ಸುಪ್ರೀಂ ಕೋರ್ಟ್‌ ಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT