ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಒಂದಿಂಚೂ ಭೂಮಿ ಚೀನಾ ವಶಪಡಿಸಿಕೊಂಡಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು: ರಾಹುಲ್

Published 25 ಆಗಸ್ಟ್ 2023, 9:27 IST
Last Updated 25 ಆಗಸ್ಟ್ 2023, 9:27 IST
ಅಕ್ಷರ ಗಾತ್ರ

ಕಾರ್ಗಿಲ್‌: ನಮ್ಮ ಭೂಮಿಯನ್ನು ಚೀನಾ ಅತಿಕ್ರಮಣ ಮಾಡುತ್ತಿದೆ ಎಂಬುದು ಲಡಾಖ್‌ನ ಪ್ರತಿಯೊಬ್ಬರಿಗೂ ಗೊತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು, ‘ಒಂದು ಇಂಚು ಭೂಮಿಯನ್ನೂ ಚೀನಾ ವಶಕ್ಕೆ ಪಡೆದಿಲ್ಲ’ ಎನ್ನುವ ಮೂಲಕ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದರು.

ಜೊಹಾನಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್‌ ರಾಷ್ಟ್ರಗಳ ಸಮಾವೇಶದ ಮಧ್ಯೆ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ–ಜಿನ್‌ಪಿಂಗ್‌ ಬುಧವಾರ ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ರಾಹುಲ್‌ ಈ ಹೇಳಿಕೆ ನೀಡಿದ್ದಾರೆ.

ಲಡಾಖ್ ಪ್ರವಾಸದ ಕೊನೆಯ ದಿನ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಕಳೆದವಾರ ಬೈಕ್‌ನಲ್ಲಿ ಇಡೀ ಲಡಾಖ್‌ ಸುತ್ತಿಬಂದೆ. ಇದೊಂದು ಕಾರ್ಯತಂತ್ರದ ಪ್ರದೇಶ. ಪಾಂಗಾಂಗ್‌ಗೆ ತೆರಳಿದಾಗ,  ಭಾರತದ ಸಾವಿರಾರು ಕಿಲೋಮೀಟರ್‌ ಪ್ರದೇಶವನ್ನು ಚೀನಾ ಅತಿಕ್ರಮಣ ಮಾಡಿದೆ ಎಂಬುದು ಸ್ಪಷ್ಟವಾಯಿತು. ದುರದೃಷ್ಟವಶಾತ್‌, ಪ್ರಧಾನಿಯವರು ‘ಒಂದು ಇಂಚು ಭೂಮಿಯನ್ನೂ ಚೀನಾ ಅತಿಕ್ರಮಣ ಮಾಡಿಲ್ಲ’ ಎಂದು ವಿರೋಧ ಪಕ್ಷಗಳ ಸಭೆಯಲ್ಲಿ ತಿಳಿಸಿದ್ದರು. ಈ ವಿಷಯದಲ್ಲಿ ಅವರು ಸತ್ಯ ಹೇಳುತ್ತಿಲ್ಲ’ ಎಂದು ಟೀಕಿಸಿದರು.

‘ಇಲ್ಲಿನ ಜನರ ರಾಜಕೀಯ ಧ್ವನಿಯನ್ನು ದಮನ ಮಾಡಲಾಗಿದೆ. ಉದ್ಯೋಗದ ಕುರಿತ ಸರ್ಕಾರದ ಎಲ್ಲ ಭರವಸೆಗಳೂ ಸುಳ್ಳಾಗಿವೆ. ಮೊಬೈಲ್‌ ನೆಟ್‌ವರ್ಕ್‌ ಮತ್ತು ವಿಮಾನಯಾನ ಸೌಲಭ್ಯದ ಕೊರತೆ ಇದೆ. ಮುಂದಿನ ಸಂಸತ್ ಅಧಿವೇಶನದಲ್ಲಿ ಈ ಎಲ್ಲ ವಿಷಯಗಳು ಕುರಿತು ಧ್ವನಿ ಎತ್ತುತ್ತೇನೆ’ ಎಂದು ಹೇಳಿದರು.

‘ಲಡಾಖ್‌ನ ಮೂಲೆಮೂಲೆಗೂ ಭೇಟಿ ನೀಡಿದೆ. ಯುವ ಜನತೆ, ತಾಯಂದಿರು, ಸಹೋದರಿಯರು ಮತ್ತು ಬಡವರೊಂದಿಗೆ ಮಾತನಾಡಿದೆ. ಕೆಲವರು ಅವರದೇ ಮನದ ಮಾತು (ಮನ್ ಕೀ ಬಾತ್‌) ಮಾತನಾಡುತ್ತಾರೆ. ನಾನು ನಿಮ್ಮ ‘ಮನದ ಮಾತು’ ಕೇಳಲು ಬಯಸುತ್ತೇನೆ’ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಅವರ ರೇಡಿಯೊ ಕಾರ್ಯಕ್ರಮವನ್ನು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT