ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತಾಶೆಯ ಹೇಳಿಕೆ ಮೂಲಕ ಪ್ರಸ್ತುತವಾಗುವ ಯತ್ನ: ಆಜಾದ್ ಹೇಳಿಕೆಗೆ ಕಾಂಗ್ರೆಸ್‌ ಟೀಕೆ

Last Updated 10 ಏಪ್ರಿಲ್ 2023, 14:03 IST
ಅಕ್ಷರ ಗಾತ್ರ

ನವದೆಹಲಿ: ‘ಗಾಂಧಿ ಕುಟುಂಬಕ್ಕೆ ‘ಅನಪೇಕ್ಷಿತ ಉದ್ಯಮಿಗಳ’ ಜೊತೆ ಸಂಪರ್ಕವಿದೆ‘ ಎಂದು ಹಿರಿಯ ಮುಖಂಡ ಗುಲಾಂ ನಬಿ ಆಜಾದ್‌ ಹೇಳಿರುವುದು, ಅವರ ಹತಾಶೆಯನ್ನು ತೋರಿಸುತ್ತದೆ. ಈ ಮೂಲಕ ಪ್ರಸ್ತುತವಾಗಿರಲು ಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಟೀಕಿಸಿದೆ.

‘ದಿನ ಕಳೆದಂತೇ ತಮ್ಮ ನಿಜವಾದ ಮುಖ ತೋರಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರತ್ತ ತಮಗಿರುವ ನಿಷ್ಠೆಯನ್ನು ವ್ಯಕ್ತಪಡಿಸಲು ಆಜಾದ್‌ ಇನ್ನಷ್ಟು ಬಾಗುತ್ತಿದ್ದಾರೆ‘ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

‘ಕಾಂಗ್ರೆಸ್‌ ನಾಯಕರನ್ನು ಕುರಿತ ಅವರ ಅವಹೇಳನಕಾರಿ ಹೇಳಿಕೆಯು ಹತಾಶೆಯನ್ನು ಬಿಂಬಿಸುತ್ತದೆ. ಅವರ ಸ್ಥಿತಿಗೆ ಮರುಕವಿದೆ ಎಂದಷ್ಟೇ ಹೇಳುತ್ತೇನೆ’ ಎಂದು ಜೈರಾಂ ರಮೇಶ್ ಅವರು ಸೋಮವಾರ ಟ್ವೀಟ್ ಮಾಡಿದ್ದಾರೆ.

ತಮ್ಮ ಆತ್ಮಚರಿತ್ರೆ ಬಿಡುಗಡೆ ಆಗುತ್ತಿರುವ ಸಂದರ್ಭದಲ್ಲಿ ಆಜಾದ್‌ ಅವರು, ಸರಣಿ ಸಂದರ್ಶನಗಳನ್ನು ನೀಡುತ್ತಿದ್ದು, ಕಾಂಗ್ರೆಸ್‌ ಪಕ್ಷದ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ರಾಹುಲ್‌ಗಾಂಧಿ ಅವರು ಅದಾನಿ ಪ್ರಕರಣದಲ್ಲಿ ಸರ್ಕಾರವನ್ನು ಟೀಕಿಸುವಾಗ ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ತೊರೆದಿದ್ದ ನಾಯಕರನ್ನೂ ಟೀಕಿಸಿದ್ದರು. ಈ ಕುರಿತ ಟ್ವೀಟ್‌ನಲ್ಲಿ ರಾಹುಲ್ ಗಾಂಧಿ ಅವರು ಆಜಾದ್‌, ಜ್ಯೋತಿರಾದಿತ್ಯ ಸಿಂಧಿಯಾ, ಹಿಮಂತ ಬಿಸ್ವಶರ್ಮಾ, ಕಿರಣ್‌ ಕುಮಾರ್ ರೆಡ್ಡಿ, ಅನಿಲ್‌ ಕೆ. ಆ್ಯಂಟನಿ ಅವರ ಹೆಸರನ್ನೂ ಉಲ್ಲೇಖಿಸಿದ್ದರು.

ಆಜಾದ್‌ ಅವರು ಕಾಂಗ್ರೆಸ್‌ ಪಕ್ಷವನ್ನು ತೊರೆದ ನಂತರ ತಮ್ಮದೇ ಪಕ್ಷ ಸ್ಥಾಪಿಸಿದ್ದರೆ, ಉಳಿದವರು ಬಿಜೆಪಿಗೆ ಸೇರಿದ್ದರು. ಈ ಪೈಕಿ ಸಿಂಧಿಯಾ ಅವರು ಕೇಂದ್ರ ಸಚಿವರಾಗಿದ್ದಾರೆ. ಹಿಮಂತ ಬಿಸ್ವಶರ್ಮಾ ಅವರು ಅಸ್ಸಾಂ ಮುಖ್ಯಮಂತ್ರಿಯಾಗಿದ್ದಾರೆ.

ಸ್ಪಷ್ಟನೆ ನೀಡಿ: ರಾಹುಲ್‌ಗೆ ಬಿಜೆಪಿ ಆಗ್ರಹ

ಪಟ್ನಾ: ‘ಅನಪೇಕ್ಷಿತ ಉದ್ಯಮಿಗಳ ಜೊತೆಗೆ ಬಾಂಧವ್ಯ’ ಕುರಿತ ಹೇಳಿಕೆ ಕಾಂಗ್ರೆಸ್‌ ಪಕ್ಷದ ಮಾಜಿ ನಾಯಕರ ಗಂಭೀರ ಆರೋಪವಾಗಿದ್ದು, ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ನಾಯಕ ರವಿಶಂಕರ ಪ್ರಸಾದ್ ಒತ್ತಾಯಿಸಿದ್ದಾರೆ.

ದೇಶ ವಿರೋಧಿ ಉದ್ಯಮಿಗಳ ಹಿತಾಸಕ್ತಿ ರಕ್ಷಣೆಗಾಗಿ ರಾಹುಲ್‌ ಗಾಂಧಿ ಅವರು ದೇಶವನ್ನು ‘ದುರ್ಬಲ’ಗೊಳಿಸಲು ಯತ್ನಿಸುತ್ತಿದ್ದಾರೆಯೇ ಎಂದು ರವಿಶಂಕರ ಪ್ರಸಾದ್ ಅವರು ಪ್ರಶ್ನಿಸಿದ್ದಾರೆ.

ರಾಹುಲ್‌ ಗಾಂಧಿ ಅವರು ವಿದೇಶಕ್ಕೆ ಹೋದಾಗಲೆಲ್ಲಾ ಕೆಲ ಅನಪೇಕ್ಷಿತ ಉದ್ಯಮಿಗಳನ್ನು ಭೇಟಿಯಾಗುತ್ತಾರೆ ಎಂದು ಆಜಾದ್‌ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ, ಅನಪೇಕ್ಷಿತ ಉದ್ಯಮಿಗಳು ಯಾರು? ಅವರ ಹಿತಾಸಕ್ತಿಗಳೇನು? ಇಂಥ ಉದ್ಯಮಿಗಳ ಪರವಾಗಿ ಹಾಗೂ ಪ್ರಧಾನಿ ವಿರುದ್ಧವಾಗಿ ರಾಹುಲ್‌ ಕೆಲಸ ಮಾಡುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT