ಜೈಪುರ: 10ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯ ಒತ್ತಡದ ಕಾರಣದಿಂದಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಧೋಲ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಬಾಡಿಗೆ ಮನೆಯಲ್ಲಿ ವಿದ್ಯಾರ್ಥಿ ಪುಷ್ಪೇಂದ್ರ ರಜಪೂತ್ (17) ವಾಸವಿದ್ದ. ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದ ವಿದ್ಯಾರ್ಥಿ ಮೃತದೇಹ ನೋಡಿದ ಮನೆಯ ಮಾಲೀಕ ಬಹದ್ದೂರ್ ಸಿಂಗ್ (70) ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹ ಕೋಣೆಯಲ್ಲಿ ನೇತಾಡುತ್ತಿರುವುದನ್ನು ಕಂಡು ಸಹಾಯಕ್ಕಾಗಿ ಬಹದ್ದೂರ್ ಸಿಂಗ್ ಕಿರುಚಿದ್ದಾರೆ. ವಿದ್ಯಾರ್ಥಿ ಮೃತದೇಹವನ್ನು ನೋಡಿದ ಕೂಡಲೇ ಸಿಂಗ್ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
‘ವಿದ್ಯಾರ್ಥಿಯ ಕೋಣೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿ ವಿಜಯ್ ಮೀನಾ ತಿಳಿಸಿದ್ದಾರೆ.