ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜವಾದ ದೇಶ ವಿರೋಧಿಗಳು ಜನರನ್ನು ಎತ್ತಿ ಕಟ್ಟುತ್ತಿದ್ದಾರೆ: ಸೋನಿಯಾ ಗಾಂಧಿ

Last Updated 14 ಏಪ್ರಿಲ್ 2023, 6:10 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅಧಿಕಾರದಲ್ಲಿರುವವರು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಡಾ. ಬಿ.ಆರ್‌.ಅಂಬೇಡ್ಕರ್‌ ಅವರ 132ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ 'The Telegraph'ಗೆ ಬರೆದಿರುವ ಲೇಖನದಲ್ಲಿ, ನಿಜವಾದ ದೇಶ ವಿರೋಧಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಜನರನ್ನು ಧರ್ಮ, ಭಾಷೆ, ಜಾತಿ ಮತ್ತು ಲಿಂಗದ ಆಧಾರದಲ್ಲಿ ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

'ಬಾಬಾ ಸಾಹೇಬರ ಪರಂಪರೆಯನ್ನು ಗೌರವಿಸುವ ಹೊತ್ತಿನಲ್ಲಿ, ಸಂವಿಧಾನದ ಯಶಸ್ಸು ಆಡಳಿತ ನಿರ್ವಹಿಸುವವರ ನಡವಳಿಕೆಯನ್ನು ಅವಲಂಬಿಸಿರುತ್ತದೆ ಎಂದು ಅವರು (ಅಂಬೇಡ್ಕರ್‌) ನೀಡಿದ್ದ ಎಚ್ಚರಿಕೆಯನ್ನು ನೆನಪಿಸಿಕೊಳ್ಳಬೇಕು' ಎಂದು ಕರೆ ನೀಡಿದ್ದಾರೆ.

ಸದ್ಯದ ಆಡಳಿತವು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಹಾಗೂ ಪತನಗೊಳಿಸುವ ಮೂಲಕ, ಸಂವಿಧಾನದ ತಳಹದಿಯಾಗಿರುವ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಮತ್ತು ನ್ಯಾಯವನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

'ಜನರ ಹಕ್ಕುಗಳನ್ನು ರಕ್ಷಿಸುವ ಬದಲು, ಕಾನೂನಗಳನ್ನು ದುರುಪಯೋಗ ಪಡಿಸಿಕೊಂಡು ಕಿರುಕುಳ ನೀಡುತ್ತಿರುವುದರಿಂದ ಸ್ವಾತಂತ್ರ್ಯವು ಅಪಾಯದಲ್ಲಿದೆ. ಅಪಾರ ಸಂಖ್ಯೆಯ ಭಾರತೀಯರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ, ಪ್ರತಿಯೊಂದು ಕ್ಷೇತ್ರದಲ್ಲೂ ಪಕ್ಷಪಾತದ ಆಧಾರದಲ್ಲಿ ಕಲವೇ ಸ್ನೇಹಿತರಿಗೆ ಉಪಚಾರ ಮಾಡುತ್ತಾ ಸಮಾನತೆಯ ಮೇಲೆ ಹಲ್ಲೆ ನಡೆಸಲಾಗುತ್ತಿದೆ' ಎಂದು ಟೀಕಾಪ್ರಹಾರ ನಡೆಸಿದ್ದಾರೆ.

'ಉದ್ದೇಶಪೂರ್ವಕವಾಗಿ ದ್ವೇಷದ ವಾತಾವರಣ ಸೃಷ್ಟಿಸಿ, ಒಬ್ಬರನ್ನೊಬ್ಬರ ಮೇಲೆ ಎತ್ತಿ ಕಟ್ಟುವ ಮೂಲಕ ಭ್ರಾತೃತ್ವವನ್ನು ನಾಶಪಡಿಸಲಾಗುತ್ತಿದೆ. ನಿರಂತರವಾಗಿ ಪ್ರಚಾರವನ್ನು ಮಾಡಿ ನ್ಯಾಯಾಂಗದ ಮೇಲೆ ಒತ್ತಡ ಹೆಚ್ಚಿಸಿ, ಅನ್ಯಾಯವನ್ನು ಹರಡಲಾಗುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇಂತಹ ವ್ಯವಸ್ಥಿತ ಆಕ್ರಮಣದ ವಿರುದ್ಧ ಸಂವಿಧಾನವನ್ನು ರಕ್ಷಿಸಲು ಜನರು ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದ್ದಾರೆ.

'ಎಲ್ಲ ಭಾರತೀಯರು ಯಾವುದೇ ರಾಜಕೀಯ ಪಕ್ಷಗಳು, ಒಕ್ಕೂಟಗಳು, ಸಂಸ್ಥೆಗಳು, ನಾಗರಿಕ ಸಂಘಟನೆಗಳು ಮತ್ತು ವೈಯಕ್ತಿಕವಾಗಿ ಯಾವುದೇ ವರ್ಗಕ್ಕೆ ಸೇರಿದರೂ, ಇಂತಹ ನಿರ್ಣಾಯಕ ಸಮಯದಲ್ಲಿ ತಮ್ಮ ಪಾತ್ರ ನಿಭಾಯಿಸಬೇಕು. ವಿಮರ್ಶಾತ್ಮಕ ಪಾಠಗಳನ್ನು ಕಲಿಸುವ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಬದುಕು ಮತ್ತು ಹೋರಾಟ, ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ' ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT