ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ಸಂಕಟ| ಬಾಳಾ ಠಾಕ್ರೆ ಹೆಸರಿಗಾಗಿ ಶಿವಸೇನೆ ಕಿತ್ತಾಟ

ಬಂಡಾಯ ಬಣಕ್ಕೆ ಸೇನಾ ಸ್ಥಾಪಕನ ಹೆಸರು ಇರಿಸಿದ್ದಕ್ಕೆ ಉದ್ಧವ್‌ ಠಾಕ್ರೆ ವಿರೋಧ
Last Updated 25 ಜೂನ್ 2022, 17:39 IST
ಅಕ್ಷರ ಗಾತ್ರ

ಮುಂಬೈ: ಶಿವಸೇನಾ ಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಬಳಸಿಕೊಳ್ಳುವ ವಿಚಾರದಲ್ಲಿ ಪಕ್ಷದ ಈಗಿನ ಮುಖ್ಯಸ್ಥ ಉದ್ಧವ್‌ ಠಾಕ್ರೆ ಮತ್ತು ಏಕನಾಥ ಶಿಂಧೆ ನೇತೃತ್ವದ ಬಂಡಾಯ ಗುಂಪಿನ ನಡುವೆ ಹಗ್ಗಜಗ್ಗಾಟ ನಡೆದಿದೆ.

ಶಿವಸೇನಾ ಮತ್ತು ಅದರ ಸ್ಥಾಪಕ ಬಾಳಾಠಾಕ್ರೆ ಅವರ ಹೆಸರನ್ನು ಯಾವುದೇ ರಾಜಕೀಯ ಪಕ್ಷ ಅಥವಾ ಗುಂಪು ಬಳಸುವಂತಿಲ್ಲ ಎಂಬ ನಿರ್ಣಯವನ್ನು ಮುಂಬೈನಲ್ಲಿ ನಡೆದ ಶಿವಸೇನಾ ರಾಷ್ಟ್ರೀಯ ಕಾರ್ಯಕಾರಿಣಿಯು ಅಂಗೀಕರಿಸಿದೆ. ಆದರೆ, ಗುವಾಹಟಿಯ ಪಂಚತಾರಾ ಹೋಟೆಲ್‌ನಲ್ಲಿ ತಂಗಿರುವ ಶಿಂಧೆ ನೇತೃತ್ವದ ಗುಂಪು, ತಮ್ಮ ಗುಂಪಿಗೆ ‘ಶಿವಸೇನಾ (ಬಾಳಾಸಾಹೇಬ್‌)’ ಎಂದು ಹೆಸರು ಇರಿಸಿದೆ.

‘ಶಿವಸೇನಾ ಪಕ್ಷವು ಬಾಳಾಠಾಕ್ರೆ ಅವರಿಗೆ ಸೇರಿದ್ದು. ಹಿಂದುತ್ವ ಮತ್ತು ಮರಾಠಿ ಅಸ್ಮಿತೆಯ ತೀವ್ರ ಸಿದ್ಧಾಂತವನ್ನು ಮುಂದಕ್ಕೆ ಒಯ್ಯಲು ಪಕ್ಷವು ಬದ್ಧವಾಗಿದೆ. ಈ ಹಾದಿಯನ್ನು ಎಂದಿಗೂ ಬದಲಾಯಿಸುವುದಿಲ್ಲ’ ಎಂದು ಪಕ್ಷದ ಸಂಸದ ಸಂಜಯ ರಾವುತ್ ಹೇಳಿದ್ದಾರೆ.

‘ಮತ ಪಡೆಯಲು ಬಯಸುವವರು ಅವರವರ ತಂದೆಯ ಹೆಸರು ಬಳಸಬೇಕೇ ವಿನಾ ಶಿವಸೇನಾದ ಪಿತಾಮಹ ಬಾಳಾಸಾಹೇಬ್‌ ಅವರ ಹೆಸರನ್ನು ಅಲ್ಲ’ ಎಂದು ಕಾರ್ಯಕಾರಿಣಿಯಲ್ಲಿ ಉದ್ಧವ್‌ ಹೇಳಿದ್ದಾಗಿ ಶಿವಸೇನಾದ ಮುಖ್ಯ ವಕ್ತಾರ ಸಂಜಯ ರಾವುತ್‌ ಉಲ್ಲೇಖಿಸಿದ್ದಾರೆ.

ಅನಧಿಕೃತ ವ್ಯಕ್ತಿಗಳು ಅಥವಾ ಪಕ್ಷಾಂತರಿಗಳ ಗುಂಪುಗಳು ಶಿವಸೇನಾ ಅಥವಾ ಬಾಳಾಸಾಹೇಬ್‌ ಠಾಕ್ರೆ ಅವರ ಹೆಸರನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಚುನಾವಣಾ ಆಯೋಗ ಹಾಗೂ ವಿಧಾನಸಭೆಗೆ ಪತ್ರ ಬರೆಯಲಾಗುವುದು ಎಂದೂ ಉದ್ಧವ್ ಹೇಳಿದ್ದಾರೆ.

ಪಕ್ಷಕ್ಕೆ ವಿಶ್ವಾಸದ್ರೋಹ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಉದ್ಧವ್‌ ಠಾಕ್ರೆ ಅವರಿಗೆ ನೀಡಿ ರಾಷ್ಟ್ರೀಯ ಕಾರ್ಯಕಾರಿಣಿಯು ನಿರ್ಧಾರ ಕೈಗೊಂಡಿದೆ. ಆದರೆ, ಬಂಡಾಯ ಎದ್ದಿರುವ ಶಾಸಕರ ಗುಂಪಿನ ನಾಯಕ ಏಕನಾಥ ಶಿಂಧೆ ವಿರುದ್ಧ ತಕ್ಷಣಕ್ಕೆ ಯಾವುದೇ ಕ್ರಮವನ್ನು ಕಾರ್ಯಕಾರಿಣಿಯು ಕೈಗೊಂಡಿಲ್ಲ.

ಸಭೆಯಲ್ಲಿ ಆರು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಬಂಡಾಯ ಶಾಸಕರ ನಡೆಯನ್ನು ಕಾರ್ಯಕಾರಿಣಿಯು ಖಂಡಿಸಿದೆ. ಪಕ್ಷವು ಉದ್ಧವ್ ಅವರ ಜತೆಗೆ ಇದೆ ಎಂದು ಘೋಷಿಸಲಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಮುಂದೆ ನಡೆಯಲಿರುವ ಎಲ್ಲ ಚುನಾವಣೆಗಳಲ್ಲಿಯೂ ಸೇನಾ ಸ್ಪರ್ಧಿಸಲಿದೆ ಎಂಬ ನಿರ್ಣಯವನ್ನೂ ಕೈಗೊಳ್ಳಲಾಗಿದೆ.

ಏಕನಾಥ ಶಿಂಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಪಕ್ಷವು ಚಿಂತಿಸುತ್ತಿದೆ ಎನ್ನಲಾಗಿದೆ.

ಕಲ್ಯಾಣ್‌ನ ಸಂಸದ ಡಾ. ಶ್ರೀಕಾಂತ್ ಶಿಂಧೆ ಅವರ ಕಚೇರಿಯ ಫಲಕವನ್ನು ಶಿವಸೈನಿಕರು ಶನಿವಾರ ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶ್ರೀಕಾಂತ್‌, ‘ಏಕನಾಥ ಶಿಂಧೆಯ ಕಾರಣಕ್ಕೆ ನಾವು ಸುಮ್ಮನಿದ್ದೇವೆ. ಇಲ್ಲದಿದ್ದರೆ, ತಿರುಗೇಟು ನೀಡಲು ನಮಗೆ ಗೊತ್ತಿದೆ’ ಎಂದಿದ್ದಾರೆ.

‘ಯಾವುದೇ ಪಕ್ಷದ ಜತೆ ವಿಲೀನ ಇಲ್ಲ’

ಶಿವಸೇನಾದ ಬಂಡಾಯ ಶಾಸಕರ ಗುಂಪು ಯಾವುದೇ ರಾಜಕೀಯ ಪಕ್ಷದ ಜತೆಗೆ ವಿಲೀನ ಆಗುವುದಿಲ್ಲ ಎಂದು ಬಂಡಾಯ ಶಾಸಕ ದೀಪಕ್‌ ಕೇಸರ್‌ಕರ್‌ ಶನಿವಾರ ಹೇಳಿದ್ದಾರೆ. ತಮ್ಮ ಗುಂಪಿಗೆ ಮೂರನೇ ಎರಡಷ್ಟು ಶಾಸಕರ ಬೆಂಬಲ ಇದೆ. ತಮ್ಮ ಬಲವನ್ನು ವಿಧಾನಸಭೆಯಲ್ಲಿ ಸಾಬೀತು ಮಾಡಲಾಗುವುದು ಎಂದೂ ಅವರು ಹೇಳಿದ್ದಾರೆ.

ಬಂಡಾಯ ಗುಂಪಿನ ನಾಯಕ ಏಕನಾಥ ಶಿಂಧೆ ಮತ್ತು ಇತರರು ತಂಗಿರುವ ಗುವಾಹಟಿಯ ಪಂಚತಾರಾ ಹೋಟೆಲ್‌ನಿಂದ ವರ್ಚುವಲ್‌ ಮಾಧ್ಯಮಗೋಷ್ಠಿ ನಡೆಸಿ ಕೇಸರ್‌ಕರ್‌ ಮಾತನಾಡಿದ್ದಾರೆ. ತಾವು ಯಾರೂ ಶಿವಸೇನಾವನ್ನು ಬಿಟ್ಟಿಲ್ಲ. ತಮ್ಮ ಗುಂ‍ಪಿಗೆ ‘ಶಿವಸೇನಾ (ಬಾಳಾಸಾಹೇಬ್‌)’ ಎಂದು ಹೆಸರು ಇರಿಸಲಾಗಿದೆ. ಶಿಂಧೆ ಅವರನ್ನು ಈ ಗುಂಪಿನ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. 55 ಶಾಸಕರ ಬೆಂಬಲ ಇರುವ ಗುಂಪಿನ ನಾಯಕನ ಸ್ಥಾನಕ್ಕೆ 16–17 ಶಾಸಕರ ಬೆಂಬಲ ಇರುವವರು ಬರಲಾಗದು. ವಿಧಾನಸಭೆಯಲ್ಲಿ ಸೇನಾ ಸದನ ನಾಯಕ ಸ್ಥಾನದಿಂದ ಶಿಂಧೆ ಅವರನ್ನು ತೆಗೆದಿರುವ ಉಪ ಸ್ಪೀಕರ್‌ ನರಹರಿ ಝಿರ್ವಾಲ್‌ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಯಾವುದೇ ರಾಜಕೀಯ ಪಕ್ಷ ತಮಗೆ ಬೆಂಬಲ ನೀಡಿಲ್ಲ. ಗುವಾಹಟಿಯಲ್ಲಿ ತಂಗಿರುವ ಶಾಸಕರೇ ಅವರವರ ಖರ್ಚನ್ನು ಭರಿಸುತ್ತಿದ್ದಾರೆ ಎಂದು ಕೇಸರ್‌ಕರ್ ಹೇಳಿದ್ದಾರೆ.ಬಂಡಾಯ ಶಾಸಕರು ಸೂರತ್‌ ಮತ್ತು ಗುವಾಹಟಿಯಲ್ಲಿ ತಂಗುವುದಕ್ಕಾಗಿ ಆಗಿರುವ ಭಾರಿ ಮೊತ್ತದ ಖರ್ಚನ್ನು ಭರಿಸುವುದು ಯಾರು ಎಂದು ಎನ್‌ಸಿಪಿ ಪ್ರಶ್ನಿಸಿದೆ.

ಇದಕ್ಕೆ ‘ಕಪ್ಪು ಹಣ’ ಬಳಕೆ ಆಗುತ್ತಿದೆಯೇ ಎಂಬ ಬಗ್ಗೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸಬೇಕು ಎಂದೂ ಕೋರಿದೆ.

16 ಬಂಡಾಯ ಶಾಸಕರಿಗೆ ನೋಟಿಸ್‌

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದಿರುವ ಶಿವಸೇನಾದ 16 ಶಾಸಕರಿಗೆ ಅಲ್ಲಿನ ವಿಧಾನಸಭಾ ಕಾರ್ಯಾಲಯವು ನೋಟಿಸ್‌ ನೀಡಿದೆ. ಸೋಮವಾರ ಸಂಜೆಯ ಒಳಗೆ ಲಿಖಿತ ಪ್ರತಿಕ್ರಿಯೆ ನೀಡಬೇಕು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಈ 16 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಶಿವಸೇನಾದ ಮುಖ್ಯ ಸಚೇತಕ ಸುನಿಲ್ ಪ್ರಭು ಅವರು ಸ್ಪೀಕರ್‌ಗೆ ಪತ್ರ ಬರೆದು ಕೋರಿದ್ದರು.

ಮುಂಬೈನಲ್ಲಿ ಬುಧವಾರ ನಡೆದ ಪಕ್ಷದ ಸಭೆಯಲ್ಲಿ ಭಾಗವಹಿಸುವಂತೆ ಈ ಶಾಸಕರಿಗೆ ಸೂಚನೆ ನೀಡಲಾಗಿತ್ತು. ಈ ಶಾಸಕರು ಸಭೆಗೆ ಹಾಜರಾಗಿರಲಿಲ್ಲ.

ಗುಜರಾತ್‌ಗೆ ಶಿಂಧೆ ಭೇಟಿ?

l ಏಕನಾಥ ಶಿಂಧೆ ಅವರು ಶನಿವಾರ ಮುಂಜಾನೆಗೂ ಮುನ್ನ ಗುಜರಾತ್‌ಗೆ ಬಂದು ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್‌ ಜತೆಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಇದನ್ನು ಯಾರೂ ದೃಢಪಡಿಸಿಲ್ಲ

l ಬಂಡಾಯ ಶಾಸಕರ ಗುಂಪು ಔಪಚಾರಿಕವಾಗಿ ಸಭೆ ಸೇರಿ ದೀಪಕ್‌ ಕೇಸರ್‌ಕರ್‌ ಅವರನ್ನು ವಕ್ತಾರನನ್ನಾಗಿ ನೇಮಿಸಿದೆ

l ಏಕನಾಥ ಶಿಂಧೆ ಅವರ ಮಗ ಶ್ರೀಕಾಂತ್‌ ಶಿಂಧೆ ಅವರು ಠಾಣೆಯಲ್ಲಿ ಸಮಾವೇಶ ನಡೆಸಿದ್ದಾರೆ

l ಸೇನಾದ ಹಿರಿಯ ಮುಖಂಡರಾದ ಅನಂತ್‌ ಗೀತೆ ಮತ್ತು ರಾಮದಾಸ್‌ ಕದಂ ಅವರು ಶಿವಸೇನಾ ರಾಷ್ಟ್ರೀಯ ಕಾರ್ಯಕಾರಿಣಿಗೆ ಹಾಜರಾಗಿಲ್ಲ. ಬಂಡಾಯ ಗುಂಪಿನ ನಾಯಕ ಶಿಂಧೆ ಅವರೂ ಗೈರುಹಾಜರಾಗಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT