ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಪ್ರಚಾರ ಮತದಾರರಿಗೆ ಮಾದರಿಯಾಗುವಂತಿರಲಿ, ದೇಶ ವಿಭಜಿಸುವಂತಲ್ಲ: EC

Published 22 ಮೇ 2024, 13:43 IST
Last Updated 22 ಮೇ 2024, 13:43 IST
ಅಕ್ಷರ ಗಾತ್ರ

ನವದೆಹಲಿ: ಜಾತಿ, ಸಮುದಾಯ, ಭಾಷೆ ಮತ್ತು ಧರ್ಮದ ಆಧಾರದಲ್ಲಿ ಚುನಾವಣಾ ಪ್ರಚಾರ ನಡೆಸದಿರುವಂತೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಕೇಂದ್ರ ಚುನಾವಣಾ ಆಯೋಗವು, ಚುನಾವಣೆಯ ಸಂದರ್ಭಗಳಲ್ಲಿ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರವನ್ನು ಬಲಿಕೊಡಲು ಸಾಧ್ಯವಿಲ್ಲ ಎಂದು ತಿಳಿಹೇಳಿದೆ.

ಎರಡೂ ಪಕ್ಷಗಳ ತಾರಾ ಪ್ರಚಾರಕರ ಮಾತುಗಳು ನೀತಿ ಸಂಹಿತೆಯ ಅವಧಿಯ ನಂತರದಲ್ಲಿಯೂ ಧಕ್ಕೆ ತರುವಂತಹ ಸಂಕಥನವನ್ನು ಸೃಷ್ಟಿಸುವಂತೆ ಇವೆ ಎಂದು ಆಯೋಗವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬುಧವಾರ ಹೇಳಿದೆ. ತಾರಾ ಪ್ರಚಾರಕರು ಆಡುತ್ತಿರುವ ಮಾತುಗಳಲ್ಲಿ ನಿರ್ದಿಷ್ಟ ವಿಧಾನವೊಂದು ಕಾಣುತ್ತಿದೆ ಎಂದು ಕೂಡ ಆಯೋಗವು ಹೇಳಿದೆ.

ಎರಡೂ ಪಕ್ಷಗಳ ಅಧ್ಯಕ್ಷರಿಗೆ ನೀಡಿದ್ದ ನೋಟಿಸ್‌ಗೆ ಪ್ರತಿಯಾಗಿ ದೊರೆತ ಉತ್ತರವನ್ನು ಉಲ್ಲೇಖಿಸಿರುವ ಆಯೋಗವು ‘ನಿಯಮಗಳಿಂದ ತಪ್ಪಿಸಿಕೊಳ್ಳಲು ತಾಂತ್ರಿಕವಾಗಿ ದೊರೆಯುವ ಉಪಾಯಗಳು ಅಥವಾ ಇತರ ರಾಜಕೀಯ ಪಕ್ಷಗಳ ಮಾತುಗಳನ್ನು ವಿಪರೀತವಾಗಿ ಅರ್ಥೈಸುವ ಮೂಲಕ ಯಾವುದೇ ಪಕ್ಷ ಮತ್ತು ಅದರ ಪ್ರಚಾರಕರು ತಮ್ಮ ಮಾತುಗಳ ಬಗ್ಗೆ ಹೊಂದಿರುವ ಹೊಣೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ’ ಎಂದು ಎಚ್ಚರಿಸಿದೆ.

ಚುನಾವಣೆಯ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳು ಜಯಗಳಿಸುವ ಉದ್ದೇಶದಿಂದ ಮಾತ್ರವೇ ಭಾಗಿಯಾಗುವುದಿಲ್ಲ. ಮತದಾರರ ಎದುರು ತಮ್ಮ ಬಗ್ಗೆ ಹೇಳಿಕೊಳ್ಳುವುದಕ್ಕೆ, ಮತದಾರರು ತಮ್ಮನ್ನು ಅನುಕರಿಸುವಂತೆ ಮಾಡುವುದಕ್ಕೆ ಹಾಗೂ ತಮ್ಮ ವಿಚಾರವಾಗಿ ಭರವಸೆಗಳನ್ನು ಬೆಳೆಸಿಕೊಳ್ಳುವಂತೆ ಮಾಡಲು ಪಕ್ಷಗಳಿಗೆ ಇದು ಅವಕಾಶ ಕಲ್ಪಿಸುತ್ತದೆ ಎಂದು ಆಯೋಗವು ಬುದ್ಧಿಮಾತು ಹೇಳಿದೆ.

‘ಇಲ್ಲಿ ಎರಡನೆಯ ಭಾಗವು ಭಾರತದ ಚುನಾವಣೆಗಳ ಪಾಲಿಗೆ, ನಮ್ಮ ಚುನಾವಣಾ ಪ್ರಜಾತಂತ್ರದ ಪಾಲಿಗೆ ಹೆಚ್ಚು ಮೌಲ್ಯಯುತವಾದ ಪರಂಪರೆಯನ್ನು ಹೊಂದಿದೆ. ಇದನ್ನು ದುರ್ಬಲಗೊಳಿಸಲು ನಿಮ್ಮ ಪಕ್ಷ ಸೇರಿದಂತೆ ಯಾರಿಗೂ ಅವಕಾಶ ನೀಡಬಾರದು’ ಎಂದು ಆಯೋಗವು ಕಾಂಗ್ರೆಸ್ ಹಾಗೂ ಬಿಜೆಪಿ ಅಧ್ಯಕ್ಷರನ್ನು ಉದ್ದೇಶಿಸಿ ಹೇಳಿದೆ.

‘ನೀತಿ ಸಂಹಿತೆಯು ನಿಷೇಧ ಹೇರಿರುವ ಯಾವುದೇ ಬಗೆಯ ಹೇಳಿಕೆಗಳನ್ನು ನೀಡದೆ ಇರುವಂತೆ ತಾರಾ ಪ್ರಚಾರಕರಿಗೆ ನಿರ್ದೇಶನ ನೀಡಲಾಗಿದೆ. ಅಂದರೆ, ಯಾವುದೇ ಪ‍ಕ್ಷ ಅಥವಾ ಅಭ್ಯರ್ಥಿಯು ಈಗಿರುವ ಭಿನ್ನಾಭಿಪ್ರಾಯಗಳನ್ನು ಹೆಚ್ಚು ಮಾಡುವ ಅಥವಾ ಭಿನ್ನ ಜಾತಿಗಳು, ಭಿನ್ನವಾದ ಭಾಷಿಕ ಅಥವಾ ಧಾರ್ಮಿಕ ಸಮುದಾಯಗಳ ನಡುವೆ ಸಂಘರ್ಷ ಉಂಟುಮಾಡುವಂತಹ ಯಾವುದೇ ಕೆಲಸ ಮಾಡುವಂತಿಲ್ಲ’ ಎಂದು ಆಯೋಗವು ಹೇಳಿದೆ.

ಚುನಾವಣಾ ಆಯೋಗವು ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 77ರ ಅಡಿಯಲ್ಲಿ ನೋಟಿಸ್ ನೀಡಿ, ತಾರಾ ಪ್ರಚಾರಕರ ಮಾತಿಗೆ ಲಗಾಮು ಹಾಕಲು ಮೊದಲ ಹೆಜ್ಜೆಯಾಗಿ ಪಕ್ಷಗಳ ಅಧ್ಯಕ್ಷರನ್ನು ಹೊಣೆಗಾರರನ್ನಾಗಿಸಿತ್ತು.

ಬಿಜೆಪಿಗೆ ಆಯೋಗದ ನಿರ್ದೇಶನಗಳು

l ಸಮಾಜವನ್ನು ಒಡೆಯುವಂತಹ ಯಾವುದೇ ಭಾಷಣ ಮಾಡದಂತೆ, ಹೇಳಿಕೆ ನೀಡದಂತೆ ಪ‍ಕ್ಷದ ಅಧ್ಯಕ್ಷರಾಗಿ ನೀವು ತಾರಾ ಪ್ರಚಾರಕರಿಗೆ ಸೂಚನೆ ನೀಡಬೇಕು.

l ಧಾರ್ಮಿಕ ಹಾಗೂ ಕೋಮು ನೆಲೆಯಲ್ಲಿ ಯಾವುದೇ ಮಾತು ಆಡದಂತೆ, ಯಾವುದೇ ಕೃತ್ಯ ಎಸಗದಂತೆ ತಾರಾ ಪ್ರಚಾರಕರಿಗೆ ಸೂಚಿಸಬೇಕು.

ಪರಿಶೀಲನೆಯಲ್ಲಿ ಕಂಡು ಬಂದಿದ್ದು

l ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬಾಂಸವಾಡಾದಲ್ಲಿ ವಿಭಜನಕಾರಿ ಭಾಷಣ ಮಾಡಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದಕ್ಕೆ ಪ್ರತಿಯಾಗಿ, ನಡ್ಡಾ ಅವರಿಗೆ ಆಯೋಗವು ನೋಟಿಸ್ ನೀಡಿತ್ತು.

l ಬಿಜೆಪಿಯ ತಾರಾ ಪ್ರಚಾರಕರ ಮಾತುಗಳು ಸತ್ಯವನ್ನು ಆಧರಿಸಿವೆ, ಅವು ಕಾಂಗ್ರೆಸ್ಸಿನ ಕೆಟ್ಟ ಉದ್ದೇಶವನ್ನು ದೇಶದ ಮುಂದೆ ಬಹಿರಂಗಪಡಿಸುತ್ತವೆ ಎಂದು ನಡ್ಡಾ ಉತ್ತರಿಸಿದ್ದರು.

l ಕಾಂಗ್ರೆಸ್ ಮತ್ತು ‘ಇಂಡಿಯಾ’ ಮೈತ್ರಿಕೂಟವು ಮತಬ್ಯಾಂಕ್‌ ರಾಜಕಾರಣದ ಕಾರಣಕ್ಕೆ ಭಾರತವನ್ನು, ಭಾರತದ ಅಸ್ಮಿತೆಯನ್ನು, ಇಲ್ಲಿನ ಮೂಲ ಹಿಂದೂಧರ್ಮವನ್ನು ವಿರೋಧಿಸಲು ಆರಂಭಿಸಿವೆ ಎಂದು ನಡ್ಡಾ ವಿವರಿಸಿದ್ದರು.

l ನಡ್ಡಾ ಅವರ ಸಮರ್ಥನೆಯನ್ನು ಒಪ್ಪಲಾಗದು ಎಂದು ಆಯೋಗ ಹೇಳಿದೆ. ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಪಕ್ಷವಾಗಿ ಬಿಜೆಪಿಯು ತನ್ನ ಪ್ರಚಾರವನ್ನು ಭಾರತದ ಸೂಕ್ಷ್ಮ ಹಾಗೂ ಬಹುತ್ವದ ಮೂಲರಚನೆಗೆ ಅನುಗುಣವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಆಯೋಗವು ನಿರೀಕ್ಷಿಸುತ್ತದೆ ಎಂದು ಹೇಳಿದೆ.

ಕಾಂಗ್ರೆಸ್ ವಿಚಾರವಾಗಿ ಆಯೋಗದ ಮಾತು

* ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಮಾತುಗಳ ಬಗ್ಗೆ ಬಿಜೆಪಿ ಸಲ್ಲಿಸಿದ್ದ ದೂರಿಗೆ ಪ್ರತಿಯಾಗಿ ಆಯೋಗವು ಖರ್ಗೆ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು. ಅಗ್ನಿಪಥ ಯೋಜನೆಯ ಕುರಿತು ಕಾಂಗ್ರೆಸ್ ನಾಯಕರು ಆಡಿದ್ದ ಮಾತುಗಳನ್ನು ಆಯೋಗ ಉಲ್ಲೇಖಿಸಿತ್ತು.

* ಖರ್ಗೆ ಅವರು ನೀಡಿದ್ದ ಸಮರ್ಥನೆಗಳನ್ನು ಆಯೋಗವು ತಿರಸ್ಕರಿಸಿದೆ.

* ಬಿಜೆಪಿಯು ಸಂವಿಧಾನವನ್ನು ಬದಲಾಯಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ಸಿನ ತಾರಾ ಪ್ರಚಾರಕರವು ಹೇಳುವುದು ಭವಿಷ್ಯ ಅನಿಶ್ಚಿತ ಎಂದು ಮತದಾರರ ಮನದಲ್ಲಿ ಭೀತಿಯನ್ನು ಸೃಷ್ಟಿಸುವಂತಿದೆ ಎನ್ನಲಾಗಿದೆ. ಅಲ್ಲದೆ, ದೇಶದಲ್ಲಿ ಅರಾಜಕತೆಯನ್ನು ಹರಡುವ ಯತ್ನ ಎಂದು ಕೂಡ ಹೇಳಲಾಗಿದೆ ಎಂದು ಆಯೋಗ ಹೇಳಿದೆ. ಇದನ್ನು ಚುನಾವಣಾ ಕಾನೂನುಗಳ ಅಡಿಯಲ್ಲಿ ಭ್ರಷ್ಟ ಕೆಲಸ ಎಂದು ಪರಿಗಣಿಸಬಹುದು ಎಂದು ಆಯೋಗ ಹೇಳಿದೆ.

27 ದಿನಗಳ ನಂತರದ ಕಿವಿಮಾತು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೋಟಿಸ್‌ ಜಾರಿಗೊಳಿಸಿದ 27 ದಿನಗಳ ನಂತರ ಕೇಂದ್ರ ಚುನಾವಣಾ ಆಯೋಗವು ಇಬ್ಬರಿಗೂ ಈ ನಿರ್ದೇಶನಗಳನ್ನು ನೀಡಿದೆ.

ಆಯೋಗವು ನೋಟಿಸ್‌ಅನ್ನು ಪಕ್ಷಗಳ ಅಧ್ಯಕ್ಷರಿಗೆ ನೀಡಿತ್ತು, ನೋಟಿಸ್ ಜೊತೆ ದೂರುಗಳನ್ನು ಲಗತ್ತಿಸಲಾಗಿತ್ತು. ಆದರೆ, ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಅರೋಪ ಎದುರಿಸುತ್ತಿರುವವರಿಗೆ ಆ ನೋಟಿಸ್ ಜಾರಿಗೊಳಿಸಿರಲಿಲ್ಲ. ಅಲ್ಲದೆ, ಉಲ್ಲಂಘನೆಯ ಆರೋಪ ಎದುರಿಸುತ್ತಿರುವವರ ಹೆಸರನ್ನು ಅದರಲ್ಲಿ ಉಲ್ಲೇಖಿಸಿರಲಿಲ್ಲ.

ಲೋಕಸಭಾ ಚುನಾವಣೆಯ ಭಾಗವಾಗಿರುವ ಏಳು ಹಂತಗಳ ಮತದಾನ ಪ್ರಕ್ರಿಯೆ ಕೊನೆಗೊಳ್ಳಲು ಹತ್ತು ದಿನಗಳು ಇರುವ ಹೊತ್ತಿನಲ್ಲಿ ಈ ನಿರ್ದೇಶನಗಳನ್ನು ಆಯೋಗ ನೀಡಿದೆ.

ನಡ್ಡಾ ಅವರು ಎರಡು ಬಾರಿ ಕಾಲಾವಕಾಶ ಕೋರಿ, ಮೇ 13ರಂದು ಉತ್ತರ ನೀಡಿದ್ದರು. ಖರ್ಗೆ ಅವರು ಒಂದು ಬಾರಿ ಕಾಲಾವಕಾಶ ಕೋರಿ ಮೇ 6ರಂದು ಉತ್ತರ ಸಲ್ಲಿಸಿದ್ದರು. ಆರಂಭದಲ್ಲಿ ಅವರಿಗೆ ಏಪ್ರಿಲ್‌ 29ರವರೆಗೆ ಸಮಯಾವಕಾಶ ನೀಡಲಾಗಿತ್ತು.

ಚುನಾವಣಾ ಆಯೋಗದ ಪ್ರಕಾರ ಕಾಂಗ್ರೆಸ್ ಪಕ್ಷವು ಬಿಜೆಪಿಯ ವಿರುದ್ಧ 12 ದೂರುಗಳನ್ನು ಸಲ್ಲಿಸಿದೆ. ಬಿಜೆಪಿಯ ತಾರಾ ಪ್ರಚಾರಕರ ಮಾತುಗಳು ಜಾತಿವಾದಿಯಾಗಿಯೂ ಕೋಮುವಾದಿಯಾಗಿಗೂ ಇವೆ. ಮತದಾರರನ್ನು ತಪ್ಪುದಾರಿಗೆ ಎಳೆಯುವಂತೆ ಇವೆ ಎಂದು ಅದು ದೂರಿತ್ತು.

ಬಿಜೆಪಿಯು ಕಾಂಗ್ರೆಸ್ಸನ್ನು ಗುರಿಯಾಗಿಸಿಕೊಂಡು ನಾಲ್ಕು ದೂರುಗಳನ್ನು ದಾಖಲಿಸಿದೆ. ಕಾಂಗ್ರೆಸ್ ಪಕ್ಷವು ರಾಮಮಂದಿರ, ಸಂವಿಧಾನ ಮತ್ತು ರಕ್ಷಣಾ ಪಡೆಗಳ ಬಗ್ಗೆ ತಪ್ಪುದಾರಿಗೆ ಎಳೆಯುವ ಮಾತುಗಳನ್ನು ಆಡಿದೆ ಎಂದು ಅದು ದೂರಿತ್ತು.

ಕಾಂಗ್ರೆಸ್ಸಿಗೆ ಆಯೋಗದ ನಿರ್ದೇಶನಗಳು

l ದೇಶದ ಸಂವಿಧಾನವನ್ನು ರದ್ದುಪಡಿಸಬಹುದು ಎಂಬಂತಹ ತಪ್ಪು ಭಾವನೆ ಮೂಡಿಸುವ ಹೇಳಿಕೆಗಳನ್ನು ನೀಡಬಾರದು ಎಂಬ ಸಂದೇಶವನ್ನು ತಾರಾ ಪ್ರಚಾರಕರಿಗೆ ರವಾನಿಸಬೇಕು.

l ಚುನಾವಣಾ ಆಯೋಗವು 2019ರ ಮಾರ್ಚ್‌ನಲ್ಲಿ ನೀಡಿದ್ದ ಸಲಹೆಗಳನ್ನು ಪೂರ್ತಿಯಾಗಿ ಪಾಲಿಸಬೇಕು. ಅಂದರೆ, ಪ್ರಚಾರದಲ್ಲಿ ತೊಡಗಿಕೊಳ್ಳುವವರು, ಅಭ್ಯರ್ಥಿಗಳು ರಕ್ಷಣಾ ಪಡೆಗಳ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಜಕೀಯ ಪ್ರಚಾರಾಂದೋಲನದಲ್ಲಿ ತೊಡಗುವಂತಿಲ್ಲ. ರಕ್ಷಣಾ ಪಡೆಗಳ ಸಾಮಾಜಿಕ–ಆರ್ಥಿಕ ಸಮೀಕರಣದ ಬಗ್ಗೆ ವಿಭಜನಕಾರಿ ಆಗಬಹುದಾದಂತಹ ಮಾತುಗಳನ್ನು ಆಡುವಂತಿಲ್ಲ.

ಪರಿಶೀಲನೆಯಲ್ಲಿ ಕಂಡು ಬಂದಿದ್ದು

l ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಮಾತುಗಳ ಬಗ್ಗೆ ಬಿಜೆಪಿ ಸಲ್ಲಿಸಿದ್ದ ದೂರಿಗೆ ಪ್ರತಿಯಾಗಿ ಆಯೋಗವು ಖರ್ಗೆ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು. ಅಗ್ನಿಪಥ ಯೋಜನೆಯ ಕುರಿತು ಕಾಂಗ್ರೆಸ್ ನಾಯಕರು ಆಡಿದ್ದ ಮಾತುಗಳನ್ನು ಆಯೋಗ ಉಲ್ಲೇಖಿಸಿತ್ತು.

l ಖರ್ಗೆ ಅವರು ನೀಡಿದ್ದ ಸಮರ್ಥನೆಗಳನ್ನು ಆಯೋಗವು ತಿರಸ್ಕರಿಸಿದೆ.

l ಬಿಜೆಪಿಯು ಸಂವಿಧಾನವನ್ನು ಬದಲಾಯಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ಸಿನ ತಾರಾ ಪ್ರಚಾರಕರವು ಹೇಳುವುದು ಭವಿಷ್ಯ ಅನಿಶ್ಚಿತ ಎಂದು ಮತದಾರರ ಮನದಲ್ಲಿ ಭೀತಿಯನ್ನು ಸೃಷ್ಟಿಸುವಂತಿದೆ ಎನ್ನಲಾಗಿದೆ. ಅಲ್ಲದೆ, ದೇಶದಲ್ಲಿ ಅರಾಜಕತೆಯನ್ನು ಹರಡುವ ಯತ್ನ ಎಂದು ಕೂಡ ಹೇಳಲಾಗಿದೆ ಎಂದು ಆಯೋಗ ಹೇಳಿದೆ. ಇದನ್ನು ಚುನಾವಣಾ ಕಾನೂನುಗಳ ಅಡಿಯಲ್ಲಿ ಭ್ರಷ್ಟ ಕೆಲಸ ಎಂದು ಪರಿಗಣಿಸಬಹುದು ಎಂದು
ಆಯೋಗ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT