ಕೋಲ್ಕತ್ತ: ಮಾತುಕತೆಯ ನೇರ ಪ್ರಸಾರ ಮಾಡಬೇಕು ಎಂಬ ಬೇಡಿಕೆಯನ್ನು ಕಿರಿಯ ವೈದ್ಯರು ಸಡಿಲಿಸದ ಪರಿಣಾಮ, ಸರ್ಕಾರದ ಜತೆಗೆ ಗುರುವಾರವೂ ಸಭೆ ನಡೆಯಲಿಲ್ಲ. ಇದರಿಂದ ಪಶ್ಚಿಮ ಬಂಗಾಳದಲ್ಲಿ ವೈದ್ಯರ ಬಿಕ್ಕಟ್ಟು ಮುಂದುವರಿದಿದೆ.
ಇಲ್ಲಿನ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ನಡೆದಿದ್ದ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ– ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಾತುಕತೆಗೆ ಕಾಯುತ್ತಿದ್ದ ಸಿ.ಎಂ:
ಮುಖ್ಯಮಂತ್ರಿ ಸಮ್ಮುಖದಲ್ಲಿಯೇ ಸಭೆ ನಡೆಯಬೇಕು ಎಂಬ ಪ್ರತಿಭಟನನಿರತ ವೈದ್ಯರ ಬೇಡಿಕೆಗೆ ಸರ್ಕಾರ ಸಮ್ಮತಿಸಿತ್ತು. ಹೀಗಾಗಿಯೇ ಗುರುವಾರ ಸಂಜೆ 5 ಗಂಟೆಗೆ ನಿಗದಿಯಾಗಿದ್ದ ಸಭೆಗೆ ಹಾಜರಾಗಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಕಿರಿಯ ವೈದ್ಯರ ಆಗಮನಕ್ಕಾಗಿ ಸುಮಾರು ಎರಡು ಗಂಟೆ ಕಾಯ್ದರು. ಆದರೆ ಸಭೆ ನಿಗದಿಯಂತೆ ನಡೆಯಲಿಲ್ಲ.
ಸಂಜೆ 5.25ಕ್ಕೆ ಸೆಕ್ರೆಟರಿಯೇಟ್ ತಲುಪಿದ ಪ್ರತಿಭಟನಕಾರರು, ಒಂದು ಗಂಟೆಗೂ ಹೆಚ್ಚು ಕಾಲ ಪ್ರವೇಶ ದ್ವಾರದಲ್ಲಿಯೇ ನಿಂತರು. ಮಾತುಕತೆಯನ್ನು ನೇರ ಪ್ರಸಾರ ಮಾಡಬೇಕು ಎಂಬ ತಮ್ಮ ಷರತ್ತನ್ನು ಸಡಿಲಿಸಲು ಕಿರಿಯ ವೈದ್ಯರು ಸಮ್ಮತಿಸಲಿಲ್ಲ. ಎರಡೂ ಕಡೆಯವರು ತಮ್ಮ ನಿಲುವುಗಳಿಗೆ ದೃಢವಾಗಿ ನಿಂತ ಪರಿಣಾಮ ಗುರುವಾರ ಯಾವುದೇ ಮಾತುಕತೆ ನಡೆಯಲಿಲ್ಲ.
ಮನವೊಲಿಸಲು ಅಧಿಕಾರಿಗಳ ಕಸರತ್ತು:
ಡಿಜಿಪಿ ರಾಜೀವ್ ಕುಮಾರ್, ಎಡಿಜಿ (ದಕ್ಷಿಣ ಬಂಗಾಳ) ಸುಪ್ರತಿಮ್ ಸರ್ಕಾರ್ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ವೈದ್ಯರ ನಿಯೋಗ ಮತ್ತು ಇತರ ಅಧಿಕಾರಿಗಳ ಜತೆ ನಿರಂತರ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಿದರು. ಆದರೆ ವೈದ್ಯರು ತಮ್ಮ ನಿಲುವಿಗೆ ಕಟಿಬದ್ಧರಾಗಿದ್ದ ಕಾರಣ, ಅವರನ್ನು ಮನವೊಲಿಸುವಲ್ಲಿ ವಿಫಲರಾದರು.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್, ‘ಮಾತುಕತೆಯ ನೇರ ಪ್ರಸಾರ ಸಾಧ್ಯವಿಲ್ಲ ಎಂಬುದನ್ನು ಕಿರಿಯ ವೈದ್ಯರಿಗೆ ಕಳುಹಿಸಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದೇವು. ಆದರೆ ಪೂರ್ಣ ಸಭೆಯನ್ನು ರೆಕಾರ್ಡ್ ಮಾಡುವ ಮೂಲಕ ದಾಖಲೀಕರಣ ಮಾಡುತ್ತೇವೆ ಎಂದೂ ಭರವಸೆ ನೀಡಿದೆವು. ಸಭೆಗಾಗಿ ಮುಖ್ಯಮಂತ್ರಿ ಅವರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಕಾಯ್ದರು. ನಾವು ಕಿರಿಯ ವೈದ್ಯರ ನಿಯೋಗವನ್ನು ಮಾತುಕತೆಗೆ ಬರುವಂತೆ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದೆವು. ಆದರೆ ಅವರು ಒಪ್ಪಲಿಲ್ಲ’ ಎಂದರು.
ಜನರ ಹಿತಕ್ಕಾಗಿ ರಾಜೀನಾಮೆ ನೀಡಲು ಸಿದ್ಧ: ಮಮತಾ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ‘ಜನರ ಹಿತದೃಷ್ಟಿಯಿಂದ ರಾಜೀನಾಮೆ ನೀಡಲು ಸಿದ್ಧ’ ಇರುವುದಾಗಿ ಗುರುವಾರ ತಿಳಿಸಿದರು.
ಇದೇ ವೇಳೆ ಅವರು ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಾಗದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರು.
ಕಿರಿಯ ವೈದ್ಯರ ಜತೆಗಿನ ಸಭೆಗಾಗಿ ಸುಮಾರು ಎರಡು ತಾಸು ಕಾದಿದ್ದ ಬ್ಯಾನರ್ಜಿ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಸಂತ್ರಸ್ತೆಗೆ ನ್ಯಾಯ ದೊರೆಯಬೇಕು ಎಂಬುದು ನನ್ನ ಕಾಳಜಿಯೂ ಆಗಿದೆ. ಆದರೆ ವೈದ್ಯರ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಾಗದಿದ್ದಕ್ಕೆ ಜನರಲ್ಲಿ ಕ್ಷಮೆ ಕೋರುತ್ತೇನೆ’ ಎಂದರು.
ಮಮತಾ ಬ್ಯಾನರ್ಜಿ ಹೇಳಿದ ಪ್ರಮುಖಾಂಶಗಳು
33 ದಿನಗಳಿಂದ ನಾವು ಸಾಕಷ್ಟು ಅವಮಾನಗಳನ್ನು ಸಹಿಸಿಕೊಂಡಿದ್ದೇವೆ. ಆದರೆ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಧಿಕ್ಕರಿಸಿ ಕರ್ತವ್ಯಕ್ಕೆ ಹಾಜರಾಗದಿರುವ ವೈದ್ಯರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ
ಕಿರಿಯ ವೈದ್ಯರ ಬೇಡಿಕೆಯಂತೆ ಮಾತುಕತೆಯ ನೇರ ಪ್ರಸಾರ ಮಾಡಲು ಸಾಧ್ಯವಿಲ್ಲ. ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಕಾರಣ ಹಾಗೆ ಮಾಡಲು ಬರುವುದಿಲ್ಲ
ರೋಗಿಗಳ ಹಿತದೃಷ್ಟಿಯಿಂದ ಮತ್ತು ಮಾನವೀಯತೆಯ ನೆಲೆಗಟ್ಟಿನಲ್ಲಿ ಕಿರಿಯ ವೈದ್ಯರು ಮಾತುಕತೆಗೆ ಮುಂದಾಗಬೇಕು. ಪ್ರತಿಭಟನನಿರತ ವೈದ್ಯರು ಸರ್ಕಾರದ ಜತೆ ಮಾತುಕತೆಯಲ್ಲಿ ತೊಡಗಬಾರದು ಎಂಬ ಉದ್ದೇಶದಿಂದ ಕೆಲ ಬಾಹ್ಯ ವ್ಯಕ್ತಿಗಳು ಅವರ ಮೇಲೆ ಪ್ರಭಾವ ಬೀರುತ್ತಿದ್ದಾರೆ
ಕಿರಿಯ ವೈದ್ಯರ ಪ್ರತಿಭಟನೆಯಿಂದ ರಾಜ್ಯದಲ್ಲಿ 27 ರೋಗಿಗಳು ಮೃತಪಟ್ಟಿದ್ದಾರೆ. ಸುಮಾರು 7 ಲಕ್ಷ ಜನರು ಬಳಲುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ವೈದ್ಯರು ಕರ್ತವ್ಯಕ್ಕೆ ಹಾಜರಾಗಬೇಕು
ಪ್ರತಿಭಟನೆಯಲ್ಲಿ ತೊಡಗಿರುವ ವೈದ್ಯರಿಗಿಂತ ನಾನು ಹಿರಿಯಳಿದ್ದೇನೆ. ಸಭೆಗೆ ಬಾರದೆ ನನ್ನನ್ನು ಎರಡು ತಾಸು ಅವರು ಕಾಯಿಸಿದರು. ನಾನು ಹಿರಿಯಳಾದ ಕಾರಣ ಕಿರಿಯರನ್ನು ಕ್ಷಮಿಸುತ್ತೇನೆ. ಅದು ನನ್ನ ಜವಾಬ್ದಾರಿ ಕೂಡ. ಅವರ ವಿರುದ್ಧ ಯಾವ ಕ್ರಮವನ್ನೂ ತೆಗೆದುಕೊಳ್ಳುವುದಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.