ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿ ಜೈಲಿನಲ್ಲಿ ಕೇರಳದ ವ್ಯಕ್ತಿ: ಬಿಡುಗಡೆಗೆ ದೇಣಿಗೆ ಮೂಲಕ ₹ 34 ಕೋಟಿ ಸಂಗ್ರಹ

Published 12 ಏಪ್ರಿಲ್ 2024, 16:18 IST
Last Updated 12 ಏಪ್ರಿಲ್ 2024, 16:18 IST
ಅಕ್ಷರ ಗಾತ್ರ

ಕೋಯಿಕ್ಕೋಡ್‌: ಸೌದಿ ಅರೇಬಿಯಾದಲ್ಲಿ ಮರಣದಂಡನೆಗೆ ಗುರಿಯಾದ ವ್ಯಕ್ತಿಯನ್ನು ರಕ್ಷಿಸಲು ಕೇರಳದ ಜನರು ಒಗ್ಗಟ್ಟು ಮತ್ತು ಸಹಾನುಭೂತಿ ಪ್ರದರ್ಶಿಸಿದ್ದು, ದೇಣಿಗೆ ಮೂಲಕ ಒಟ್ಟಾರೆ ₹34 ಕೋಟಿ ಸಂಗ್ರಹಿಸಿದ್ದಾರೆ.

ಕೋಯಿಕ್ಕೋಡ್‌ ಮೂಲದ ಅಬ್ದುಲ್‌ ರಹೀಂ ಅವರು 2006ರಲ್ಲಿ ಸೌದಿಯ ಬಾಲಕನನ್ನು ಕೊಂದ ಆರೋಪದ ಮೇಲೆ, ಗಲ್ಫ್‌ ರಾಷ್ಟ್ರದಲ್ಲಿ 18 ವರ್ಷಗಳಿಂದ ಜೈಲಿನಲ್ಲಿದ್ದಾರೆ.

ರಹೀಂ ಅವರ ಬಿಡುಗಡೆಗಾಗಿ ಕೆಲಸ ಮಾಡಲು ಐದು ದಿನಗಳ ಹಿಂದೆ ರಚನೆಯಾದ ಕ್ರಿಯಾ ಸಮಿತಿಗೆ ಆರಂಭದಲ್ಲಿ ಅಲ್ಪ ಮೊತ್ತವನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಗಿತ್ತು. ಅದರೆ ಕ್ರಮೇಣ ತೀವ್ರಗೊಂಡ ಅಭಿಯಾನಕ್ಕೆ, ವಿಶ್ವದಾದ್ಯಂತ ನೆಲೆಸಿರುವ ಕೇರಳದ ಜನರು ನೆರವಿನ ಹಸ್ತ ಚಾಚಿದರು ಎಂದು ಸಂಘಟಕರು ಶುಕ್ರವಾರ ಮಾಹಿತಿ ನೀಡಿದರು.

2006ರಲ್ಲಿ ರಹೀಂ ಅವರು ತಾನು ಆರೈಕೆ ಮಾಡುತ್ತಿದ್ದ ಅಂಗವಿಕಲ ಬಾಲಕನ ಸಾವಿಗೆ ಕಾರಣರಾದರು. ಈ ಪ್ರಕರಣದಲ್ಲಿ ಜೈಲು ಸೇರಿದ ಅವರಿಗೆ, ಕ್ಷಮಾದಾನ ನೀಡಲು ಬಾಲಕನ ಕುಟುಂಬ ನಿರಾಕರಿಸಿತು. ಇದರ ಪರಿಣಾಮ ಅವರಿಗೆ 2018ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಯಿತು.

ಈ ಸಂಬಂಧ ಸಲ್ಲಿಕೆಯಾದ ಮೇಲ್ಮನವಿಗಳನ್ನು ಉನ್ನತ ನ್ಯಾಯಾಲಯಗಳು ತಿರಸ್ಕರಿಸಿದವು. ಆದರೆ, ರಹೀಂ ಅವರು ಪರಿಹಾರ ಮೊತ್ತ ನೀಡಿದರೆ ಕ್ಷಮಿಸುವುದಾಗಿ ಮೃತ ಬಾಲಕನ ಕುಟುಂಬ ಒಪ್ಪಿಕೊಂಡಿತು ಎಂದು ಕ್ರಿಯಾ ಸಮಿತಿ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದರು. 

ರಿಯಾದ್‌ನಲ್ಲಿರುವ ಕೇರಳ ಮೂಲದ 75ಕ್ಕೂ ಹೆಚ್ಚು ಸಂಸ್ಥೆಗಳು, ಉದ್ಯಮಿ ಬಾಬ್ಬಿ ಚೆಮ್ಮನ್ನೂರ್‌, ರಾಜ್ಯದ ವಿವಿಧ ರಾಜಕೀಯ ಸಂಘಟನೆಗಳು, ಸಾಮಾನ್ಯ ಜನರು ಆರ್ಥಿಕ ನೆರವು ನೀಡಿದ್ದಾರೆ ಎಂದು ಅವರು ವಿವರಿಸಿದರು. 

‘ಇಷ್ಟೊಂದು ಮೊತ್ತ ಸಂಗ್ರಹಿಸಬಹುದು ಎಂದು ನಾನು ಯೋಚಿಸಿಯೇ ಇರಲಿಲ್ಲ. ₹ 34 ಕೋಟಿ ಸಂಗ್ರಹಿಸುವುದು ಹೇಗೆ ಎಂಬುದು ತಿಳಿಯದೆ ದಿಕ್ಕುತೋಚದಂತಾಗಿತ್ತು. ಅದರೆ ಈಗ ಅದು ಸಾಧ್ಯವಾಗಿದೆ’ ಎಂದು ರಹೀಂ ತಾಯಿ ಪ್ರತಿಕ್ರಿಯಿಸಿದ್ದಾರೆ.

ಹಣ ಸಂಗ್ರಹಿಸಲು ಬಾಬ್ಬಿ ಚೆಮ್ಮನ್ನೂರ್‌ ಅವರು ಕೆಲವು ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಅಲ್ಲದೆ ತಮ್ಮ ಕೆಲ ಉತ್ಪನ್ನಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ನೆರವು ನೀಡಿದರು ಎಂದು ಕ್ರಿಯಾ ಸಮಿತಿ ಸದಸ್ಯರು ತಿಳಿಸಿದರು. ನಿಧಿ ಸಂಗ್ರಹ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಮಿತಿಯು ಮೊಬೈಲ್‌ ಅಪ್ಲಿಕೇಷನ್‌ ಸಿದ್ಧಪಡಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT