ನವದೆಹಲಿ: ಇತ್ತೀಚೆಗೆ ಈಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ನಾಯಕ ಜಗ್ಗಿ ವಾಸುದೇವ್ ಅವರು ನವದೆಹಲಿಯ ಇಂದ್ರಪ್ರಸ್ಥದ ಅಪೊಲೊ ಆಸ್ಪತ್ರೆಯಲ್ಲಿ ತುರ್ತು ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಮಿದುಳು ಶಸ್ತ್ರಚಿಕಿತ್ಸೆ ನಂತರ ಸದ್ಗುರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಈಶಾ ಫೌಂಡೇಶನ್ ಎಕ್ಸ್ ತಾಣದ ಮೂಲಕ ತಿಳಿಸಿದೆ.
ಸದ್ಗುರು ಅವರ ಚೇತರಿಕೆಗಾಗಿ ಲಕ್ಷಾಂತರ ಜನ ಪ್ರಾರ್ಥನೆ ಸಲ್ಲಿಸಿದ್ದಿರಿ. ಇದಕ್ಕಾಗಿ ನಾವು ನಿಮಗೆ ಆಭಾರಿಗಳಾಗಿದ್ದೇವೆ. ಅವರ ಆರೋಗ್ಯ ಸ್ಥಿರವಾಗಿದ್ದು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಫೌಂಡೇಶನ್ ತಿಳಿಸಿದೆ.
ಮಿದುಳಿಗೆ ರಕ್ಷಾ ಕವಚದಂತಿರುವ ಸ್ನಾಯುವಿನಲ್ಲಿ ರಕ್ತ ಸಂಗ್ರಹಗೊಂಡಿದ್ದರಿಂದಾಗಿ ಬಳಲುತ್ತಿದ್ದ ಸದ್ಗುರು ಅವರಿಗೆ ಮಾರ್ಚ್ 17ರಂದು ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಈಚೆಗೆ 4 ವಾರಗಳಿಂದ ಅವರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿತ್ತು. ನೋವಿನಲ್ಲೂ ಅವರು ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮಾರ್ಚ್ 8ರ ಮಹಾಶಿವರಾತ್ರಿ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದ್ದರು.
ತಲೆನೋವು ಮತ್ತಷ್ಟು ತೀವ್ರಗೊಂಡಾಗ ಮಾರ್ಚ್ 15ರಂದು ಹಿರಿಯ ನರರೋಗ ತಜ್ಞ ಡಾ. ವಿನಿತ್ ಸೂರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಕೂಡಲೇ ವೈದ್ಯರು ಎಂಆರ್‌ಐ ಮಾಡಿ ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದರು.
66 ವರ್ಷದ ಸದ್ಗುರು ಮಣ್ಣನ್ನು ರಕ್ಷಿಸಿ, ನದಿಗಳನ್ನು ಉಳಿಸಿ ಮುಂತಾದ ಅಭಿಯಾನ ಕೈಗೊಂಡಿದ್ದರು.