ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಸಳೆ ಕಣ್ಣೀರು ಸುರಿಸುವುದನ್ನು ಮೋದಿ ನಿಲ್ಲಿಸಲಿ: ಮಮತಾ ಬ್ಯಾನರ್ಜಿ

Published 5 ಮೇ 2024, 14:33 IST
Last Updated 5 ಮೇ 2024, 14:33 IST
ಅಕ್ಷರ ಗಾತ್ರ

ಬೋಲ್‌ಪುರ(ಪಶ್ಚಿಮ ಬಂಗಾಳ): ಸಂದೇಶ್‌ಖಾಲಿ ಘಟನೆ ಕುರಿತಂತೆ ಹಣ ಬಲದಿಂದ ಬಿಜೆಪಿಯು ಸುಳ್ಳು ಮಾಹಿತಿ ಹಬ್ಬಿಸಿತ್ತು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಆರೋಪಿಸಿದ್ದಾರೆ.

ಬೋಲ್‌ಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯೇ ಈ ಸಂಚು ರೂಪಿಸಿರುವ ಸಂಗತಿ ಇತ್ತೀಚೆಗೆ ನಡೆದ ಮಾರುವೇಷ ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿದೆ. ಹೀಗಾಗಿ, ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೊಸಳೆ ಕಣ್ಣೀರು ಸುರಿಸುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಬಿಜೆಪಿ ನಾಯಕರು ಸುಳ್ಳುಗಳನ್ನು ಸೃಷ್ಟಿಸಿದ್ದು, ಸುಳ್ಳುಗಳನ್ನು ಹಬ್ಬಿಸುವುದಕ್ಕೆ ಕೆಲವರಿಗೆ ಹಣ ನೀಡುವ ಮೂಲಕ ಈ ಪಿತೂರಿ ರೂಪಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಸಂದೇಶ್‌ಖಾಲಿ ಕುರಿತಂತೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಬಿಜೆಪಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯುತ್ತದೆ ಎಂದು ಯಾರಾದರೂ ಊಹಿಸಿದ್ದಿರಾ’ ಎಂದು ಪ್ರಶ್ನಿಸಿದರು.

‘ಇಂತಹ ಘೋರ ಆರೋಪಗಳನ್ನು ಮಾಡುವ ಮೂಲಕ ಪಶ್ಚಿಮ ಬಂಗಾಳದ ತಾಯಂದಿರ ಗೌರವಕ್ಕೆ ಧಕ್ಕೆ ತರಬೇಡಿ. ನಮ್ಮ ಪಕ್ಷದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವುದಕ್ಕೆ ರಾಜ್ಯದ ಮಹಿಳೆಯರಿಗೆ ಹಣ ನೀಡುವ ಮೂಲಕ ಅವರಿಗೆ ಅಗೌರವ ತೋರಬೇಡಿ’ ಎಂದೂ ಹೇಳಿದರು.

ಸಂದೇಶಖಾಲಿ ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ಎಂದು ಹೇಳಲಾಗುವ ವ್ಯಕ್ತಿಯೊಬ್ಬರು, ‘ಈ ಸಂಚಿನ ಹಿಂದೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಕೈವಾಡ ಇದೆ’ ಎಂದು ಹೇಳುತ್ತಿರುವ ವಿಡಿಯೊವೊಂದನ್ನು ಟಿಎಂಸಿ, ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ಬಿಡುಗಡೆ ಮಾಡಿತ್ತು.

‘ಶಹಜಹಾನ್ ಶೇಖ್‌ ಸೇರಿದಂತೆ ಮೂವರು ಟಿಎಂಸಿ ನಾಯಕರ ವಿರುದ್ಧ ಅತ್ಯಾಚಾರದ ಆರೋಪಗಳನ್ನು ಮಾಡುವಂತೆ ಸ್ಥಳೀಯ 3–4 ಮಹಿಳೆಯರನ್ನು ಪ್ರಚೋದಿಸುವಂತೆ ಸುವೇಂದು ಅಧಿಕಾರಿ ಹಾಗೂ ಇತರ ಬಿಜೆಪಿ ನಾಯಕರು ನನಗೆ ಸೂಚಿಸಿದ್ದರು’ ಎಂಬುದಾಗಿ ಆ ವ್ಯಕ್ತಿ ಹೇಳುತ್ತಿರುವುದು ವಿಡಿಯೊದಲ್ಲಿದೆ.

ಈ ವಿಡಿಯೊದ ವಿಶ್ವಾಸಾರ್ಹತೆಯನ್ನು ಸ್ವತಂತ್ರವಾಗಿ ಪರಿಶೀಲನೆ ನಡೆಸಿಲ್ಲ ಎಂದು ಪಿಟಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT