ಮುಂಬೈ: ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭಾನುವಾರ ಭೇಟಿ ಮಾಡಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಹಾ ವಿಕಾಸ್ ಆಘಾಡಿ(ಎಂವಿಎ) ಮೈತ್ರಿಕೂಟದ ಪರವಾಗಿ ಪ್ರಚಾರ ಮಾಡುವುದಾಗಿ ಭರವಸೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸತ್ಯಪಾಲ್ ಅವರು, ‘ರಾಜ್ಯದಲ್ಲಿರುವ ಆಡಳಿತ ವಿರೋಧಿ ಅಲೆಯನ್ನು ಗಮನಿಸಿದರೆ, ಎಂವಿಎಗೆ ಭರ್ಜರಿ ಗೆಲುವಾಗುವ ವಿಶ್ವಾಸವಿದೆ ಮತ್ತು ಆಡಳಿತರೂಢ ಬಿಜೆಪಿಯನ್ನು ಜನ ಮಹಾರಾಷ್ಟ್ರದಿಂದ ಓಡಿಸಲಿದ್ದಾರೆ’ ಎಂದು ಹೇಳಿದರು.
ಎಂವಿಎ ಮೈತ್ರಿಕೂಟದ ಭಾಗವಾಗಿರುವ ಶಿವಸೇನಾ(ಉದ್ಧವ್ ಬಣ), ಕಾಂಗ್ರೆಸ್ ಮತ್ತು ಎನ್‌ಸಿಪಿ (ಶರದ್ ಬಣ) ವಿಧಾನಸಭೆ ಚುನಾವಣೆಯಲ್ಲಿ ಒಗ್ಗಟ್ಟಾಗಿ ಮುನ್ನಡೆಯುವಂತೆ ಸತ್ಯಪಾಲ್ ಸಲಹೆ ನೀಡಿದ್ದಾರೆ.
‘ಮಹಾರಾಷ್ಟ್ರ ಸಮಸ್ಯೆಗಳು ಮತ್ತು ಇಂಡಿಯಾ ಒಕ್ಕೂಟದ ಬಗ್ಗೆ ಉದ್ಧವ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯು ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರಲಿದೆ. ಅದರ ಫಲಿತಾಂಶವು ಬಿಜೆಪಿಯ ಶವಪೆಟ್ಟಿಗೆಯ ಕೊನೆಯ ಮೊಳೆಯಾಗಲಿದೆ’ ಎಂದರು.