ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀಸ್ತಾ ಸೆಟಲ್ವಾಡ್ ಜಾಮೀನು ಅರ್ಜಿ: ವಿಸ್ತೃತ ಪೀಠಕ್ಕೆ ವರ್ಗಾವಣೆ

Published 1 ಜುಲೈ 2023, 16:19 IST
Last Updated 1 ಜುಲೈ 2023, 16:19 IST
ಅಕ್ಷರ ಗಾತ್ರ

ನವದೆಹಲಿ: ಕೂಡಲೇ, ನ್ಯಾಯಾಲಯಕ್ಕೆ ಶರಣಾಗುವಂತೆ ಗುಜರಾತ್‌ ಹೈಕೋರ್ಟ್‌ ಶನಿವಾರ ನೀಡಿದ್ದ ಆದೇಶದ ವಿರುದ್ಧ ಸಾಮಾಜಿಕ ಹೋ‌ರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. 

2002ರ ಗುಜರಾತ್‌ ಗಲಭೆ ಪ್ರಕರಣದಲ್ಲಿ ಮುಗ್ಧ ಜನರನ್ನು ಸಾಕ್ಷ್ಯಗಳಾಗಿ ತಯಾರು ಮಾಡಿದ ಆರೋಪದ ಮೇಲೆ ತೀಸ್ತಾ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶ್ರೀಕುಮಾರ್‌ ಸೇರಿದಂತೆ ಇತರರ ವಿರುದ್ಧ ಗುಜರಾತ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಈ ಪ್ರಕರಣದಲ್ಲಿ ತೀಸ್ತಾ ಅವರಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ನೀಡಿತ್ತು. ಇದರ ಅವಧಿ ಮುಗಿದಿದ್ದರಿಂದ ಕೋರ್ಟ್‌ಗೆ ಶರಣಾಗುವಂತೆ ಹೈಕೋರ್ಟ್‌ ಸೂಚಿಸಿತ್ತು.

ಹಾಗಾಗಿ, ತ್ವರಿತವಾಗಿ ಜಾಮೀನಿನ ವಿಚಾರಣೆ ನಡೆಸುವಂತೆ ತೀಸ್ತಾ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಅವರ ಸೂಚನೆ ಮೇರೆಗೆ ನ್ಯಾಯಾಲಯದ ಕಲಾಪ ಮುಗಿದ ಬಳಿಕ ಸಂಜೆ 6.30ಕ್ಕೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್‌ ಎಸ್‌. ಓಕಾ ಮತ್ತು ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರಿದ್ದ ವಿಭಾಗೀಯ ಪೀಠವು ಈ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿತು.

‘ತೀಸ್ತಾಗೆ ಶರಣಾಗಲು ಹೈಕೋರ್ಟ್‌ ಸ್ವಲ್ಪ ಕಾಲಾವಕಾಶ ನೀಡಬೇಕಿತ್ತು’ ಎಂದು ನ್ಯಾಯಮೂರ್ತಿ ಓಕಾ ಹೇಳಿದರು.

ಆದರೆ, ವಿಸ್ತೃತ ಪೀಠವು ಈ ಅರ್ಜಿಯನ್ನು ಯಾವಾಗ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. 

ಸರ್ಕಾರದ ವಾದವೇನು?: ಗುಜರಾತ್‌ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ, ‘ಸರ್ಕಾರದ ವಿರುದ್ಧ ತೀಸ್ತಾ ಅವರು ಗಂಭೀರ ಆರೋಪ ಮಾಡಿದ್ದಾರೆ. ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪ ಹೊತ್ತಿರುವ ಅವರು ಮಧ್ಯಂತರ ಜಾಮೀನಿಗೂ ಅರ್ಹರಿಲ್ಲ’ ಎಂದು ವಾದಿಸಿದರು.

ಹಿರಿಯ ವಕೀಲ ಚಂದರ್ ಉದಯ್ ಸಿಂಗ್ ಮತ್ತು ವಕೀಲರಾದ ಅಪರ್ಣಾ ಭಟ್‌ ಅವರು, ತೀಸ್ತಾ ಪರ ಹಾಜರಾಗಿದ್ದರು.

ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ವೇಳೆ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಕಳಂಕ ತರುವ ಉದ್ದೇಶದಿಂದ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದ ಮೇಲೆ ತೀಸ್ತಾ ವಿರುದ್ಧ‌‌ 2022ರ ಜೂನ್‌ 24ರಂದು ಎಫ್‌ಐಆರ್‌ ದಾಖಲಿಸಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅವರಿಗೆ ಸೆಪ್ಟೆಂಬರ್‌ 2ರಂದು ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ನೀಡಿತ್ತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT