ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆದ್ದಾರಿ ಅತಿಕ್ರಮಣ: ತಂಡ ರಚಿಸಲು ಸುಪ್ರೀಂ ಕೋರ್ಟ್ ಸೂಚನೆ

Published 3 ಸೆಪ್ಟೆಂಬರ್ 2024, 14:29 IST
Last Updated 3 ಸೆಪ್ಟೆಂಬರ್ 2024, 14:29 IST
ಅಕ್ಷರ ಗಾತ್ರ

ನವದೆಹಲಿ: ಹೆದ್ದಾರಿಗಳ ಅತಿಕ್ರಮಣದ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸಲು ತಂಡ ರಚಿಸುವಂತೆ, ಅತಿಕ್ರಮಣದ ಬಗ್ಗೆ ದೂರು ನೀಡಲು ಸಾರ್ವಜನಿಕರಿಗೆ ಸಾಧ್ಯವಾಗುವಂತೆ ಪೋರ್ಟಲ್ ಅಭಿವೃದ್ಧಿಪಡಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಅಗಸ್ಟೀನ್ ಜಾರ್ಜ್ ಮಸೀಹ್ ಅವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತಿಕ್ರಮಣ ನಡೆದಿದೆಯೇ ಎಂಬುದನ್ನು ಕಾಲಕಾಲಕ್ಕೆ ಪರಿಶೀಲಿಸಲು ಸೂಕ್ತವಾದ ತಂಡಗಳನ್ನು ರಚಿಸುವಂತೆ ಸಚಿವಾಲಯಕ್ಕೆ ಸೂಚನೆ ನೀಡಿದೆ.

‘ಪ್ರತಿ ಹೆದ್ದಾರಿಯ ನಿರ್ದಿಷ್ಟ ಪ್ರದೇಶಕ್ಕೆ ಒಂದು ತಂಡವನ್ನು ಹೊಣೆ ಮಾಡಬೇಕು’ ಎಂದು ಪೀಠವು ಈಚೆಗೆ ನೀಡಿದ ಆದೇಶದಲ್ಲಿ ಹೇಳಿದೆ. ಈ ನಿರ್ದೇಶನವನ್ನು ಅನುಷ್ಠಾನಕ್ಕೆ ತರಲು ಪೀಠವು ಕೇಂದ್ರ ಸರ್ಕಾರಕ್ಕೆ ಸೆಪ್ಟೆಂಬರ್ 30ರವರೆಗೆ ಗಡುವು ನೀಡಿದೆ. 

ಪರಿಶೀಲನಾ ತಂಡಗಳು ಅತಿಕ್ರಮಣವನ್ನು ಗುರುತಿಸಿದ ನಂತರದಲ್ಲಿ, ಅದರ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ತಕ್ಷಣವೇ ವರದಿ ಮಾಡುವ ವ್ಯವಸ್ಥೆ ಆಗಬೇಕು. ಪ್ರಾಧಿಕಾರವು ಆ ಅತಿಕ್ರಮಣವನ್ನು ತೆರವು ಮಾಡಬೇಕು ಎಂದು ಪೀಠ ಹೇಳಿದೆ.

‘ಅತಿಕ್ರಮಣದ ಬಗ್ಗೆ ವರದಿ ಮಾಡಲು ಅವಕಾಶ ಕಲ್ಪಿಸುವ ಪೋರ್ಟಲ್‌ನಲ್ಲಿ, ಅತಿಕ್ರಮಣಕ್ಕೆ ಸಂಬಂಧಿಸಿದ ಚಿತ್ರಗಳನ್ನು ಹಾಗೂ ಅದರ ಸ್ಥಳವನ್ನು ತಿಳಿಸಲು ವ್ಯವಸ್ಥೆ ಇರಬೇಕು. ಹಾಗೆಯೇ, ಅತಿಕ್ರಮಣದ ಬಗ್ಗೆ ಮಾಹಿತಿ ನೀಡಲು ಶುಲ್ಕರಹಿತ ಸಹಾಯವಾಣಿಯೊಂದನ್ನು ಆರಂಭಿಸಬೇಕು. ಜನರಿಂದ ಪಡೆದ ದೂರು ಆಧರಿಸಿ ಕೈಗೊಂಡ ಕ್ರಮದ ಬಗ್ಗೆ ಪೋರ್ಟಲ್‌ನಲ್ಲಿಯೇ ಮಾಹಿತಿ ಒದಗಿಸಬೇಕು’ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT