ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ: ಎಎಪಿ ಮುಖಂಡ ಸಂಜಯ್ ಸಿಂಗ್‌ಗೆ SC ಜಾಮೀನು

Published 2 ಏಪ್ರಿಲ್ 2024, 9:06 IST
Last Updated 2 ಏಪ್ರಿಲ್ 2024, 9:06 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಅವರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಜಾಮೀನು ನೀಡಲು ಜಾರಿ ನಿರ್ದೇಶನಾಲಯ (ಇ.ಡಿ) ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ.

ಜಾಮೀನು ಕೋರಿ ಸಿಂಗ್‌ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ದೀಪಂಕರ್‌ ದತ್ತಾ ಮತ್ತು ಪಿ.ಬಿ.ವರಾಳೆ ಅವರ ಪೀಠವು, ಆರು ತಿಂಗಳಿಂದ ಜೈಲಿನಲ್ಲಿರುವ ಸಿಂಗ್‌ ಅವರಿಗೆ ಜಾಮೀನಿನ ಮೇಲೆ ಬಿಡುಗಡೆಗೆ ನಿರ್ದೇಶನ ನೀಡಿತು.

‘ಸಿಂಗ್‌ ಅವರು ತಮ್ಮ ರಾಜಕೀಯ ಚಟುವಟಿಕೆ ಮುಂದುವರಿಸಬಹುದು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆಗಳನ್ನು ನೀಡುವಂತಿಲ್ಲ’ ಎಂದು ಪೀಠ ಈ ವೇಳೆ ಸೂಚಿಸಿತು.

ಜಾಮೀನಿಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ವಿಶೇಷ ನ್ಯಾಯಾಲಯ ನಿಗದಿಪಡಿಸುತ್ತದೆ ಎಂದ ಪೀಠವು, ಸಿಂಗ್‌ ಅವರಿಗೆ ನೀಡಲಾದ ಜಾಮೀನು ಆದೇಶವನ್ನು ಪೂರ್ವ ನಿದರ್ಶನ ಎಂದು ಪರಿಗಣಿಸಲು ಆಗುವುದಿಲ್ಲ ಎಂದೂ ಹೇಳಿತು.

ಇದಕ್ಕೂ ಮುನ್ನ, ಸಿಂಗ್‌ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದಕ್ಕೆ ತನಿಖಾ ಸಂಸ್ಥೆಗೆ ಯಾವುದೇ ಅಭ್ಯಂತರವಿಲ್ಲ ಎಂದು ಜಾರಿ ನಿರ್ದೇಶನಾಲಯದ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌.ವಿ.ರಾಜು ಅವರು ಪೀಠಕ್ಕೆ ತಿಳಿಸಿದರು.

ಆದಾಗ್ಯೂ ಸಿಂಗ್‌ ಅವರ ಬಳಿ ಯಾವುದೇ ಹಣ ಪತ್ತೆಯಾಗಿಲ್ಲವಲ್ಲ ಎಂದು ಪ್ರಶ್ನಿಸಿದ ಪೀಠವು, ಅವರ ವಿರುದ್ಧದ ₹ 2 ಕೋಟಿ ಲಂಚದ ಆರೋಪವನ್ನು ವಿಚಾರಣೆ ವೇಳೆ ಪರಿಶೀಲಿಸಬಹುದು ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರಿಗೆ ಸೂಚಿಸಿತು.

ಸಿಂಗ್‌ ಪರವಾಗಿ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ವಾದ ಮಾಡಿದರು. ಸಿಂಗ್‌ ಅವರನ್ನು ಇ.ಡಿ ಕಳೆದ ವರ್ಷದ ಅಕ್ಟೋಬರ್‌ 4ರಂದು ಬಂಧಿಸಿತ್ತು. 

ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಎಎಪಿ ನಾಯಕನಿಗೆ ಜಾಮೀನು ದೊರೆತಿರುವುದು ಪಕ್ಷದ ನಾಯಕರು, ಕಾರ್ಯಕರ್ತರನ್ನು ಕೊಂಚ ನಿರಾಳರನ್ನಾಗಿಸಿದೆ. ಆದರೆ, ಈ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಅವರ ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಇನ್ನೂ ತಿಹಾರ್‌ ಜೈಲಿನಲ್ಲಿದ್ದಾರೆ.

ಸತ್ಯಮೇವ ಜಯತೆ: ಸಂಜಯ್ ಸಿಂಗ್ ಅವರಿಗೆ ಜಾಮೀನು ಸಿಕ್ಕ ನಂತರ ದೆಹಲಿ ಸಚಿವೆ ಆತಿಶಿ ಅವರು ತಮ್ಮ ‘ಎಕ್ಸ್‌’ನಲ್ಲಿ ‘ಸತ್ಯಮೇವ ಜಯತೆ’ ಎಂದು ಪ್ರತಿಕ್ರಿಯಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT