ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್ ಖರೀದಿ ಒಪ್ಪಂದ : ನಾಳೆ ವಿಚಾರಣೆ

ಸುಪ್ರೀಂಕೋರ್ಟ್‌ಗೆ ಎಎಪಿ: ಎಸ್‌ಐಟಿ ತನಿಖೆಗೆ ಒತ್ತಾಯ
Last Updated 8 ಅಕ್ಟೋಬರ್ 2018, 20:41 IST
ಅಕ್ಷರ ಗಾತ್ರ

ನವದೆಹಲಿ: ಭಾರತ–ಫ್ರಾನ್ಸ್ ನಡುವಿನ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ಸಲ್ಲಿಕೆಯಾಗಿರುವ ಮೂರು ಅರ್ಜಿಗಳನ್ನುಸುಪ್ರೀಂಕೋರ್ಟ್‌ ಬುಧವಾರ (ಅ.10) ಒಟ್ಟಿಗೇ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ವಕೀಲ ವಿನೀತ್ ಧಂಡಾ ಅವರು ರಫೇಲ್ ಒಪ್ಪಂದ ಸಂಬಂಧಹೊಸ ಪಿಐಎಲ್ ಸಲ್ಲಿಸಿದ್ದು,ಮುಖ್ಯನ್ಯಾಯಮೂರ್ತಿ ರಂಜನ್ ಗೊಯೊಯಿ, ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಕೆ.ಎಂ ಜೋಸೆಫ್ ಅವರ ಪೀಠದಲ್ಲಿ ವಿಚಾರಣೆಗೆ ಬರಲಿದೆ.

ಯುಪಿಎ ಹಾಗೂ ಎನ್‌ಡಿಎ ಅವಧಿಯಲ್ಲಿ ನಿಗದಿಪಡಿಸಿದ್ದ ಖರೀದಿ ಮೊತ್ತ ಹಾಗೂ ಒಪ್ಪಂದದ ಮಾಹಿತಿಯನ್ನು ಸುಪ್ರೀಂಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಡಾಸೋ ಕಂಪನಿಯು ರಿಲಯನ್ಸ್‌ಗೆ ನೀಡಿದ ಗುತ್ತಿಗೆ ಬಗ್ಗೆಯೂ ಮಾಹಿತಿಯನ್ನು ಕೇಳಲಾಗಿದೆ.

‘ರಫೇಲ್ ಖರೀದಿ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಪ್ರತಿಪಕ್ಷಗಳು ಅವಮಾನಕರವಾಗಿ ಹಾಗೂ ಪ್ರಚೋದಿಸುವ ರೀತಿಯಲ್ಲಿ ವಾಗ್ದಾಳಿಗೆ ಇಳಿದಿವೆ. ಕಡೇ ಪಕ್ಷ ನ್ಯಾಯಾಲಯಕ್ಕಾದರೂ ಒಪ್ಪಂದದ ಸತ್ಯಾಸತ್ಯತೆ ತಿಳಿಯಬೇಕಿದೆ’ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಕೋರ್ಟ್ ಮೊರೆ ಹೋದ ಎಎಪಿ: ಈ ನಡುವೆ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರೂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ರಫೇಲ್ ಖರೀದಿ ತನಿಖೆಗೆ ಸುಪ್ರೀಂಕೋರ್ಟ್ ಕಣ್ಗಾವಲಿನಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸುವಂತೆ ಅವರು ಆಗ್ರಹಿಸಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಂಡಿದ್ದ 126 ಯುದ್ಧವಿಮಾನ ಖರೀದಿ ಒಪ್ಪಂದವನ್ನು ಎನ್‌ಡಿಎ ಸರ್ಕಾರ ರದ್ದುಗೊಳಿಸಿದ ಕಾರಣವನ್ನೂ ತಿಳಿಯಲು ಅವರು ಬಯಸಿದ್ದಾರೆ. ಎಚ್‌ಎಎಲ್ ಹೊರಗಿಟ್ಟು, ಅನನುಭವಿ ರಿಲಯನ್ಸ್ ಡಿಫೆನ್ಸ್ ಕಂಪನಿಗೆ ಗುತ್ತಿಗೆ ನೀಡಿದ್ದು ಹೇಗೆ ಎಂದು ಅವರು ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.

ವಕೀಲ ಎಂ.ಎಲ್ ಶರ್ಮಾ ಅವರು ಈ ಮೊದಲು ಸಲ್ಲಿಸಿದ್ದ ಅರ್ಜಿಯೂ ಬುಧವಾರವೇ ವಿಚಾರಣೆಗೆ ಬರಲಿದೆ. ರಫೇಲ್ ಒಪ್ಪಂದಕ್ಕೆ ತಡೆ ನೀಡುವಂತೆ ಅವರು ಮನವಿ ಮಾಡಿದ್ದರು. ಸ್ವತಂತ್ರ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡ ಟಿ.ಎಸ್. ಪೂನಾವಾಲಾ ಅವರು ಮಾರ್ಚ್‌ನಲ್ಲಿ ಕೋರ್ಟ್ ಮೊರೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT