ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಹಿ ಈದ್ಗಾ ಮಸೀದಿ ಸರ್ವೆ: ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ

Published 15 ಡಿಸೆಂಬರ್ 2023, 10:27 IST
Last Updated 15 ಡಿಸೆಂಬರ್ 2023, 10:37 IST
ಅಕ್ಷರ ಗಾತ್ರ

ನವದೆಹಲಿ: ಶ್ರೀಕೃಷ್ಣನ ಜನ್ಮಸ್ಥಳಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಥುರಾದ ಶ್ರೀಕೃಷ್ಣ ದೇವಾಲಯ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿ ಜಾಗದ ಸರ್ವೆಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಶ್ರೀಕೃಷ್ಣನ ಜನ್ಮಸ್ಥಳದ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂದು ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿದಂತೆ ಮಸೀದಿ ಜಾಗದಲ್ಲಿ ಸರ್ವೆ ನಡೆಸಲು ಅಲಹಾಬಾದ್ ಹೈಕೋರ್ಟ್ ಗುರುವಾರ ಅನುಮತಿ ನೀಡಿತ್ತು. ಈ ಆದೇಶಕ್ಕೆ ತಡೆ ನೀಡಬೇಕು ಎಂದು ಮಸೀದಿ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

‘ಈ ಪ್ರಕರಣದಲ್ಲಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್, ಪ್ರತಿವಾದಿಗಳಿಗೆ ರಿಟ್ ಅರ್ಜಿ ಸಲ್ಲಿಸಲು ಸೂಚಿಸಿತ್ತು. ಆದರೆ ಈಗ, ಕೆಲವು ಅರ್ಜಿಗಳನ್ನು ಮಾತ್ರ ಪುರಸ್ಕರಿಸಿದ್ದು, ಇದು ದೂರಗಾಮಿ ಪರಿಣಾಮಗಳನ್ನು ಉಂಟು ಮಾಡುತ್ತದೆ’ ಎಂದು ಮಸೀದಿ ಪರ ವಕೀಲ ಹುಝೇಫಾ ಅಹಮದಿ ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಈ ಹಂತದಲ್ಲಿ ನಾವು ಏನನ್ನೂ ಹೇಳುವಂತಿಲ್ಲ. ಒಂದೊಮ್ಮೆ ಆದೇಶ ವ್ಯತಿರಿಕ್ತವಾಗಿದ್ದಲ್ಲಿ ಇದೇ ಪೀಠದ ಮುಂದೆ ಅರ್ಜಿ ಸಲ್ಲಿಸಿ’ ಎಂದು ಹೇಳುವ ಮೂಲಕ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು.

ತ್ರಿಸದಸ್ಯ ಅಡ್ವೊಕೇಟ್‌ ಕಮಿಷನರ್ ನೇಮಕಕ್ಕೆ ಸೂಚನೆ

ಶಾಹಿ ಈದ್ಗಾ ಮಸೀದಿ ಜಾಗದ ಸರ್ವೆ ನಡೆಸಲು ಅಲಹಾಬಾದ್ ಹೈಕೋರ್ಟ್‌ ಗುರುವಾರ ಅನುಮತಿ ನೀಡಿತ್ತು. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತ್ರಿಸದಸ್ಯ ಅಡ್ವೊಕೇಟ್‌ ಕಮಿಷನರ್‌ಗಳನ್ನು ನೇಮಿಸಲು ನ್ಯಾಯಾಲಯ ಸೂಚಿಸಿತ್ತು. ಸರ್ವೆ ವಿಧಾನ ಹೇಗಿರಬೇಕು ಎಂಬುದನ್ನು ಡಿ. 18ರಂದು ನಡೆಯುವ ಮುಂದಿನ ವಿಚಾರಣೆ ಸಂದರ್ಭದಲ್ಲಿ ತಿಳಿಸಲಾಗುವುದು ಎಂದೂ ಪೀಠ ಹೇಳಿತ್ತು.

ಮೊಘಲ್ ಚಕ್ರವರ್ತಿ ಔರಂಗಜೇಬ್ ಕಾಲದಲ್ಲಿ ಕೃಷ್ಣನ ಜನ್ಮಸ್ಥಳವನ್ನು ನೆಲಸಮಗೊಳಿಸಿ ಅಲ್ಲಿ ಮಸೀದಿ ಕಟ್ಟಲಾಗಿದೆ. ಈ ನಿಟ್ಟಿನಲ್ಲಿ ಮಸೀದಿಯ ಸರ್ವೆ ನಡೆಸಿ, ಅಲ್ಲಿ ಹಿಂದೂ ದೇವಾಲಯದ ಮೇಲೆ ಮಸೀದಿ ಕಟ್ಟಲಾಗಿದೆಯೇ ಎಂಬುದನ್ನು ಅಡ್ವೊಕೇಟ್ ಕಮಿಷನರ್ ಮೇಲ್ವಿಚಾರಣೆಯಲ್ಲಿ ಪತ್ತೆ ಮಾಡಬೇಕು ಎಂದು ಕೋರಿ ಭಗವಾನ್ ಶ್ರೀ ಕೃಷ್ಣ ವಿರಾಜಮಾನ್‌ ಭಕ್ತ ಮಂಡಳಿಯ ಹರಿ ಶಂಕರ್ ಜೈನ್ ಹಾಗೂ ಇತರರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 

13.37 ಎಕರೆ ಪ್ರದೇಶಕ್ಕೂ ಸಂಬಂಧಿಸಿದಂತೆ 1968ರಲ್ಲಿ ಶಾಹಿ ಈದ್ಗಾ ಮಸೀದಿ ಸಮಿತಿ ಹಾಗೂ ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್‌ ನಡುವೆ ಒಪ್ಪಂದ ನಡೆದಿದ್ದು, ಅದರನ್ವಯ ಮಸೀದಿಯು ಈ ಜಾಗವನ್ನು ಬಳಸಲು ಅನುಮತಿಸಲಾಗಿತ್ತು ಎಂದೂ ಅರ್ಜಿಯಲ್ಲಿ ಹೇಳಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT