ನವದೆಹಲಿ: ಯುಜಿಸಿ ಎನ್‌ಇಟಿ ಪರೀಕ್ಷೆಯನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಜೂನ್ 19ರಂದು ನಡೆದಿದ್ದ ಯುಜಿಸಿ ಎನ್‌ಇಟಿ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿತ್ತು. ನಂತರ, ಆಗಸ್ಟ್ 21ರಂದು ಮತ್ತೊಮ್ಮೆ ನಡೆಸಲಾಗುವುದು’ ಎಂದು ಕೇಂದ್ರ ಹೇಳಿತ್ತು.
‘ಪರೀಕ್ಷೆಯನ್ನು ರದ್ದು ಮಾಡಬಾರದು ಎಂದು ಪ್ರವೀಣ್ ದಾಬಸ್ ಮತ್ತು ಇತರರ ಒಟ್ಟು 47 ಅರ್ಜಿಗಳಿವೆ. ಆದರೆ, ಒಟ್ಟು 9 ಲಕ್ಷ ಆಕಾಂಕ್ಷಿಗಳು ಪರೀಕ್ಷೆ ಬರೆಯಬೇಕಿದೆ. ಆದ್ದರಿಂದ, ವಿದ್ಯಾರ್ಥಿಗಳಿಗೆ ಗೊಂದಲವಾಗಬಾರದು. ನಿಗದಿತ ದಿನದಂದೇ ಪರೀಕ್ಷೆ ನಡೆಯಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠವು ಹೇಳಿತು.
‘ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬುದು ಸುಳ್ಳು. ಅಕ್ರಮ ನಡೆದಿಲ್ಲ ಎಂಬುದರ ಕುರಿತು ಸಾಕ್ಷ್ಯಗಳು ದೊರೆತಿವೆ’ ಎಂದು ಸಿಬಿಐ ಹೇಳಿದೆ. ಹಾಗಿದ್ದ ಮೇಲೆ ಮತ್ತೊಮ್ಮೆ ಪರೀಕ್ಷೆ ನಡೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಿಬಿಐ ತನ್ನ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲು ಸೂಚಿಸಿ’ ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಇದನ್ನೂ ನ್ಯಾಯಾಲಯ ತಿರಸ್ಕರಿಸಿದೆ.