ನವದೆಹಲಿ: ವಿಚಾರಣಾ ನ್ಯಾಯಾಲಯವು ವ್ಯಕ್ತಿಗೆ ವಿಧಿಸಿದ್ದ ಮರಣ ದಂಡನೆಯನ್ನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್, ಪುತ್ರ ಹಾಗೂ ಇಬ್ಬರು ಸಹೋದರರಿಗೆ ಬೆಂಕಿ ಹಚ್ಚಿದ್ದ ಆರೋಪಗಳಿಂದ ಆತನನ್ನು ಮುಕ್ತಗೊಳಿಸಿದೆ.
‘ಸಂತ್ರಸ್ತರ ಪೈಕಿ ಇಬ್ಬರ ಮರಣಪೂರ್ವ ಹೇಳಿಕೆಗಳಿಗೆ ಹಾಗೂ ಪ್ರಮುಖ ಸಾಕ್ಷಿಗಳು ನೀಡಿರುವ ಹೇಳಿಕೆಗಳಿಗೂ ಹೊಂದಿಕೆಯಾಗುತ್ತಿಲ್ಲ’ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಜೆ.ಬಿ.ಪಾರ್ದೀವಾಲಾ ಹಾಗೂ ಪಿ.ಕೆ.ಮಿಶ್ರಾ ಅವರಿದ್ದ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿ, ಕಳೆದ ಎಂಟು ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿರುವ ಅರ್ಜಿದಾರ ಇರ್ಫಾನ್ ಅವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶಿಸಿದೆ.
‘ವ್ಯಕ್ತಿಯ ಮರಣಪೂರ್ವ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ಸಂಶಯವಿದ್ದಾಗ, ಅದನ್ನು ಪುರಾವೆಯ ಭಾಗವಾಗಿ ಪರಿಗಣಿಸಬಹುದೇ ಹೊರತು ತೀರ್ಪು ನೀಡಲು ಅದೊಂದೇ ಆಧಾರವಾಗದು’ ಎಂದು ನ್ಯಾಯಪೀಠವು ತನ್ನ 36 ಪುಟಗಳ ತೀರ್ಪಿನಲ್ಲಿ ಹೇಳಿದೆ.
ತನ್ನ ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಕಾರಣಕ್ಕೆ ಪುತ್ರ ಇಸ್ಲಾಮುದ್ದೀನ್, ಸಹೋದರರಾದ ಇರ್ಶಾದ್ ಮತ್ತು ನೌಶಾದ್ ಎಂಬುವವರಿಗೆ 2014ರ ಆಗಸ್ಟ್ 5ರ ರಾತ್ರಿ ಇರ್ಫಾನ್ ಬೆಂಕಿ ಹಚ್ಚಿದ್ದ ಎಂದು ಆರೋಪಿಸಲಾಗಿತ್ತು. ನಂತರ, ಮೂವರು ದೆಹಲಿಯ ಡಾ.ರಾಮಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮೂವರು ನೀಡಿದ್ದ ಮರಣಪೂರ್ವ ಹೇಳಿಕೆಗಳನ್ನು ಪರಿಗಣಿಸಿ, ಇರ್ಫಾನ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದು ಅಲಹಾಬಾದ್ ಹೈಕೋರ್ಟ್ 2018ರಲ್ಲಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಇರ್ಫಾನ್, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.