ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು: ಮೇ 10ಕ್ಕೆ ಆದೇಶ

Published 8 ಮೇ 2024, 14:18 IST
Last Updated 8 ಮೇ 2024, 14:18 IST
ಅಕ್ಷರ ಗಾತ್ರ

ನವದೆಹಲಿ: ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡುವುದಕ್ಕೆ ಸಂಬಂಧಿಸಿದ ಆದೇಶವನ್ನು ಶುಕ್ರವಾರ (ಮೇ 10) ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಜಾರಿ ನಿರ್ದೇಶನಾಲಯವು (ಇ.ಡಿ) ತಮ್ಮನ್ನು ಬಂಧಿಸಿರುವ ಕ್ರಮ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ನಡೆಸಿದೆ.

‘ಮಧ್ಯಂತರ ಜಾಮೀನಿಗೆ ಸಂಬಂಧಿಸಿದ ಮಧ್ಯಂತರ ಆದೇಶವನ್ನು ನಾವು ಶುಕ್ರವಾರ ನೀಡಲಿದ್ದೇವೆ. ಬಂಧನವನ್ನು ಪ್ರಶ್ನಿಸಿರುವ ಪ್ರಮುಖ ಅರ್ಜಿಯನ್ನು ಕೂಡ ಅದೇ ದಿನ ಕೈಗೆತ್ತಿಕೊಳ್ಳಲಾಗುತ್ತದೆ’ ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.

ಖನ್ನಾ ಅವರು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಬೇಲಾ ಎಂ. ತ್ರಿವೇದಿ ಅವರು ಇದ್ದ ಇನ್ನೊಂದು ಪೀಠದಲ್ಲಿ ಇದ್ದರು. ಕೇಜ್ರಿವಾಲ್ ಅವರ ಅರ್ಜಿಯ ಕುರಿತು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ಸ್ಪಷ್ಟನೆ ಕೋರಿದಾಗ, ನ್ಯಾಯಮೂರ್ತಿ ಖನ್ನಾ ಈ ಮಾತು ಹೇಳಿದರು.

ಕೇಜ್ರಿವಾಲ್ ಅವರು ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. 

ಎರಡು ಭಾಗಗಳಾಗಿ ವಿಂಗಡಣೆ:

ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್ ಅವರು ಸಲ್ಲಿಸಿರುವ ಅರ್ಜಿಯನ್ನು ಪೀಠವು ಎರಡು ಭಾಗಗಳಾಗಿ ವಿಂಗಡಿಸಿಕೊಂಡಿದೆ. ಅವರ ಮುಖ್ಯ ಅರ್ಜಿಯು ಇ.ಡಿ. ತಮ್ಮನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿದೆ. ತಮ್ಮ ಬಂಧನವನ್ನು ಅಕ್ರಮ ಎಂದು ಘೋಷಿಸುವಂತೆ ಅವರು ಅದರಲ್ಲಿ ಕೋರಿದ್ದಾರೆ.

ಎರಡನೇ ಭಾಗದಲ್ಲಿ ಕೇಜ್ರಿವಾಲ್ ಅವರು, ಲೋಕಸಭಾ ಚುನಾವಣೆ ನಡೆಯುತ್ತಿರುವ ಕಾರಣ ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿದ್ದಾರೆ. ಮಧ್ಯಂತರ ಜಾಮೀನು ನೀಡುವುದಕ್ಕೆ ಸಂಬಂಧಿಸಿದ ಆದೇಶವನ್ನು ಪೀಠವು ಕಾಯ್ದಿರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT