ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್ ಅರ್ಜಿ: ಕೇಂದ್ರ ಸರ್ಕಾರ ಮತ್ತೆ ನಿರಾಳ

ಯುದ್ಧವಿಮಾನ ಖರೀದಿ ಒಪ್ಪಂದದ ತನಿಖೆ ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್‌
Last Updated 14 ನವೆಂಬರ್ 2019, 21:37 IST
ಅಕ್ಷರ ಗಾತ್ರ

ನವದೆಹಲಿ: ‘ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದ ತನಿಖೆ ಅಗತ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಮತ್ತೆ ಹೇಳಿದೆ. ಈ ಒಪ್ಪಂದದ ತನಿಖೆ ಅಗತ್ಯವಿಲ್ಲ ಎಂದಿದ್ದ ತೀರ್ಪಿನ ಮರುಪರಿಶೀಲನೆಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಪೀಠವು ಗುರುವಾರ ವಜಾ ಮಾಡಿದೆ.

ರಫೇಲ್ ಒಪ್ಪಂದದಲ್ಲಿ ಅಕ್ರಮದ ಆರೋಪ ಎದುರಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನ ತೀರ್ಪು ಎರಡನೇ ಬಾರಿ ನಿರಾಳ ತಂದಿದೆ.

‘ಒಪ್ಪಂದದಲ್ಲಿನ ನಿರ್ಧಾರ ಕೈಗೊಳ್ಳುವಿಕೆ ಪ್ರಕ್ರಿಯೆ, ಬೆಲೆ ನಿಗದಿ ಮತ್ತು ಪೂರೈಕೆದಾರರಿಂದ ದೇಶಿ ಪಾಲುದಾರ ಕಂಪನಿಯ ಆಯ್ಕೆಗೆ ಸಂಬಂಧಿಸಿದ ತಕರಾರುಗಳನ್ನು 2018ರ ಡಿಸೆಂಬರ್ 14ರಂದೇ ಇತ್ಯರ್ಥಪಡಿಸಿದ್ದೇವೆ. ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವ ಮತ್ತು ತನಿಖೆ ನಡೆಸುವ ಅಗತ್ಯವಿಲ್ಲ’ ಎಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿದ್ದ ಪೀಠವು ಹೇಳಿದೆ.

ಅರ್ಜಿದಾರರು ತಮ್ಮನ್ನು ತಾವು, ಒಪ್ಪಂದದ ವಿಶ್ಲೇಷಕರು ಎಂದು ಬಿಂಬಿಸಿಕೊಳ್ಳುವ ಮತ್ತು ನ್ಯಾಯಾಲಯವೂ ಇದೇ ಕೆಲಸ ಮಾಡಬೇಕು ಎಂದು ಒತ್ತಾಯಿಸುವ ಪ್ರಯತ್ನವಿದು. ಒಪ್ಪಂದವನ್ನು ಅಂತಿಮಗೊಳಿಸುವ ಮುನ್ನ ಹಲವು ಹಂತದ ಚರ್ಚೆಗಳು ನಡೆದಿರುತ್ತವೆ. ನಂತರ ಸೂಕ್ತ ಪ್ರಾಧಿಕಾರವೇ ಒಪ್ಪಂದವನ್ನು ಅಂತಿಮಗೊಳಿಸಿರುತ್ತದೆ ಎಂದು ಪೀಠವು ಹೇಳಿದೆ.

‘ಅಂದಿನ ಸಂದರ್ಭಕ್ಕೆ ತಕ್ಕಂತೆ ವಿಮಾನದ ಬೆಲೆ ನಿಗದಿ ಆಗುತ್ತದೆ. ಸೇಬಿನೊಂದಿಗೆ ಕಿತ್ತಳೆಯನ್ನು ಹೋಲಿಸಲು ಸಾಧ್ಯವೇ? ಇದೇ ರೀತಿ,ಬರಿಯ ವಿಮಾನ ಮತ್ತು ಶಸ್ತ್ರಸಜ್ಜಿತ ವಿಮಾನವನ್ನು ಹೋಲಿಸಲು ಸಾಧ್ಯವಿಲ್ಲ. ವಿಮಾನದ ಬೆಲೆಯನ್ನು ನಿಗದಿ ಮಾಡುವುದು ನ್ಯಾಯಾಲಯದ ಕೆಲಸವಲ್ಲ. ಈ ಬಗ್ಗೆ ನ್ಯಾಯಾಲಯವನ್ನು ಎಡತಾಕಿರುವ ವ್ಯಕ್ತಿಯ ಅನುಮಾನದ ಆಧಾರದ ಮೇಲೆ ಈ ವಿಚಾರವನ್ನು ಪರಿಶೀಲನೆಗೆ ಎತ್ತಿಕೊಳ್ಳುವುದು ಸಹ ನ್ಯಾಯಾಲಯದ ಕೆಲಸವಲ್ಲ’ ಎಂದು ಪೀಠವು ಮತ್ತೊಮ್ಮೆ ಹೇಳಿದೆ.

‘ರಫೇಲ್‌ ವಿಮಾನ ಪೂರೈಕೆದಾರರು ದೇಶಿ ಪಾಲುದಾರಿಕೆ ಕಂಪನಿಯನ್ನು ಆಯ್ಕೆ ಮಾಡುವ ವಿಚಾರ ಸರ್ಕಾರ ಮತ್ತು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಇದನ್ನೂ ಹಿಂದೆಯೇ ಇತ್ಯರ್ಥಪಡಿಸಲಾಗಿದೆ’ ಎಂದು ಪೀಠ ಹೇಳಿದೆ.

ರಾಹುಲ್ ಗಾಂಧಿಗೆ ಎಚ್ಚರಿಕೆ
ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ವಿರುದ್ಧರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್‌ ವಿಲೇವಾರಿ ಮಾಡಿದೆ. ರಾಹುಲ್ ಗಾಂಧಿ ಅವರ ಕ್ಷಮೆಯಾಚನೆಯನ್ನು ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್‌, ಮತ್ತೆ ಹೀಗಾಗಬಾರದು ಎಂಬ ಎಚ್ಚರಿಕೆ ನೀಡಿದೆ.

ರಾಹುಲ್ ಗಾಂಧಿ ಅವರು ತಮ್ಮ ಚುನಾವಣಾ ಭಾಷಣಗಳಲ್ಲಿ, ‘ಕಾವಲುಗಾರನೇ ಕಳ್ಳ’ ಎಂದು ಪದೇಪದೇ ಹೇಳಿದ್ದರು. ಇದರ ವಿರುದ್ಧ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದರು.

ರಾಹುಲ್ ಅವರು ಈ ಸಂಬಂಧ ನ್ಯಾಯಾಲಯಕ್ಕೆ ಮೂರು ಪ್ರಮಾಣಪತ್ರ ಸಲ್ಲಿಸಿದ್ದರು. ಅಲ್ಲದೆ ಬೇಷರತ್ ಕ್ಷಮೆ ಯಾಚಿಸಿದ್ದರು.

ಈ ಕ್ಷಮೆಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.‘ನ್ಯಾಯಾಲಯದ ತೀರ್ಪನ್ನು ಪರಿಶೀಲಿಸದೆಯೇ, ಪ್ರಧಾನಿ ವಿರುದ್ಧ ಇಂತಹ ಆಪಾದನೆ ಮಾಡಿದ್ದು ದುರದೃಷ್ಟಕರ. ರಾಹುಲ್ ಗಾಂಧಿ ದೇಶದ ರಾಜಕಾರಣದಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಅಂತಹವರು ನ್ಯಾಯಾಲಯವನ್ನು ಇಂತಹ ವಿಚಾರಗಳಿಗೆ ಎಳೆಯಬಾರದು’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಜೆಪಿಸಿ ರಚನೆಗೆ ಒತ್ತಾಯ
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರ ತೀರ್ಪು, ರಫೇಲ್ ಹಗರಣದ ತನಿಖೆಗೆ ದೊಡ್ಡ ಬಾಗಿಲನ್ನು ತೆರೆದಿದೆ. ಇದರ ತನಿಖೆಗೆ ಜಂಟಿ ಸದನ ಸಮಿತಿಯನ್ನು (ಜೆಪಿಸಿ) ರಚಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ರಫೇಲ್ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ್ದ ಪೀಠದಲ್ಲಿದ್ದ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರು ಪ್ರತ್ಯೇಕ ತೀರ್ಪು ನೀಡಿದ್ದರು. ಅದರಲ್ಲಿ, ‘ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂದು ಸಿಬಿಐಗೆ ದೂರು ನೀಡಲಾಗಿದೆ. ನ್ಯಾಯಾಲಯವು ಇದನ್ನು ಪರಿಶೀಲಿಸುವ ಸ್ವರೂಪಕ್ಕೂ, ಒಬ್ಬ ಪೊಲೀಸ್ ಅಧಿಕಾರಿ ಪರಿಶೀಲಿಸುವ ಸ್ವರೂಪಕ್ಕೂ ವ್ಯತ್ಯಾಸವಿದೆ. ಹೀಗಾಗಿ ಅರ್ಜಿದಾರರು ನೀಡಿದ್ದ ದೂರನ್ನು,ಎಫ್‌ಐಆರ್ ದಾಖಲಿಸಲು ಮತ್ತು ತನಿಖೆ ನಡೆಸಲು ಪರಿಗಣಿಸಬಹುದಿತ್ತು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಅಂಶವನ್ನು ಉಲ್ಲೇಖಿಸಿ, ರಾಹುಲ್ ಗಾಂಧಿ ಅವರು ಜೆಪಿಸಿ ರಚನೆಗೆ ಒತ್ತಾಯಿಸಿದ್ದಾರೆ.

*
ಸರ್ಕಾರ ನೀಡಿದ ಸುಳ್ಳು ದಾಖಲೆಗಳ ಆಧಾರದಲ್ಲಿ ಈ ಮೊಕದ್ದಮೆ ಇತ್ಯರ್ಥಪಡಿಸಲಾಗಿದೆ ಎಂಬ ಪ್ರತಿಪಾದನೆಯಲ್ಲಿ ಹುರುಳಿಲ್ಲ. ಹೀಗಾಗಿ ಮರುಪರಿಶೀಲನಾ ಅರ್ಜಿ ವಜಾ ಮಾಡಲಾಗಿದೆ.
–ಸುಪ್ರೀಂ ಕೋರ್ಟ್

*
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ಆರೋಪಗಳು, ಪ್ರಧಾನಿಯ ವ್ಯಕ್ತಿತ್ವಕ್ಕೆ ಮಸಿಬಳಿಯುವ ಪ್ರಯತ್ನವಾಗಿತ್ತು. ಜನರ ಹಾದಿ ತಪ್ಪಿಸಿದ್ದಕ್ಕಾಗಿ ರಾಹುಲ್ ಕ್ಷಮೆ ಕೇಳಬೇಕು
–ರಾಜನಾಥ್ ಸಿಂಗ್, ರಕ್ಷಣಾ ಸಚಿವ

*
ರಾಹುಲ್ ಗಾಂಧಿಯ ಆರೋಪಗಳು ಸಂಶಯಾಸ್ಪದ ವಾಗಿದ್ದವು. ಇದರ ಹಿಂದಿನ ಶಕ್ತಿ ಯಾವುದು ಎಂಬುದನ್ನು ತಿಳಿಯಲು ದೇಶದ ಜನ ಕಾತರರಾಗಿದ್ದಾರೆ.
–ರವಿಶಂಕರ್ ಪ್ರಸಾದ್ ಕೇಂದ್ರ ಸಚಿವ

*
ರಫೇಲ್‌ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಬಿಂಬಿಸಿದ್ದು ದೊಡ್ಡ ನಾಟಕ. ಇದರ ರೂವಾರಿಗಳಾದ ಕಾಂಗ್ರೆಸ್, ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಕೇಳಬೇಕು.
–ಅಮಿತ್ ಶಾ, ಕೇಂದ್ರ ಗೃಹ ಸಚಿವ

*
ನನ್ನ ಬಾಲ್ಯದಲ್ಲಿ ‘ಬಕ್ರಾ ಕಿಸ್ತೊ ಮೇ’ ಎಂಬ ಹಾಸ್ಯ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಈಗ ರಾಹುಲ್ ಅವರ ಕ್ಷಮೆ ಕಿಸ್ತೊ (ಕಂತು) ಮೇ ಎನ್ನಬೇಕಾಗಿದೆ.
–ಮೀನಾಕ್ಷಿ ಲೇಖಿ, ರಾಹುಲ್ ವಿರುದ್ಧ ಮೊಕದ್ದಮೆ ಹೂಡಿದ್ದ ಬಿಜೆಪಿ ಸಂಸದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT