ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಎಂ ಕೇರ್ಸ್ ನಿಧಿಯಡಿ ಸಂಗ್ರಹವಾದ ಮೊತ್ತ ಬಹಿರಂಗಪಡಿಸಲಿ: ಕೇಂದ್ರಕ್ಕೆ ಅಖಿಲೇಶ್

Published 16 ಫೆಬ್ರುವರಿ 2024, 3:26 IST
Last Updated 16 ಫೆಬ್ರುವರಿ 2024, 3:26 IST
ಅಕ್ಷರ ಗಾತ್ರ

ಲಖನೌ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವುದು ಸ್ವಾಗತಾರ್ಹ. ಇದರಿಂದಾಗಿ ಪ್ರಜಾಪ್ರಭುತ್ವದ ಪುನಶ್ಚೇತನಕ್ಕೆ ಅನುಕೂಲವಾಗಲಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಚುನಾವಣಾ ಬಾಂಡ್‌ಗಳ ಅಕ್ರಮ ಮತ್ತು ತಕ್ಷಣದ ರದ್ದತಿ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪ್ರಜಾಪ್ರಭುತ್ವದ ಪುನಶ್ಚೇತನಕ್ಕೆ ಸ್ವಾಗತಾರ್ಹ ನಿರ್ಧಾರವಾಗಿದೆ. ಇದು ಬಿಜೆಪಿಯ ಭ್ರಷ್ಟಾಚಾರ, ಕಾನೂನುಬಾಹಿರ ನೀತಿಗಳನ್ನು ಬಹಿರಂಗಪಡಿಸುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

2020–21ರಲ್ಲಿ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಪಿ.ಎಂ ಕೇರ್ಸ್ ನಿಧಿಯಡಿಯಲ್ಲಿ ಸಂಗ್ರಹವಾದ ಒಟ್ಟು ಮೊತ್ತವನ್ನು ಕೂಡ ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕು ಎಂದು ಅಖಿಲೇಶ್ ಒತ್ತಾಯಿಸಿದ್ದಾರೆ.

ಪಿಎಂ ಕೇರ್ಸ್ ಫಂಡ್ ಹಾಗೂ ಬಿಜೆಪಿ ಸಂಗ್ರಹಿಸಿರುವ ಹಲವು ರೀತಿಯ ದೇಣಿಗೆಗಳ ಕುರಿತಾದ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಆದರೆ, ದೇಣಿಗೆ ವಿಚಾರದಲ್ಲಿ ಬಿಜೆಪಿ ಮೌನವಹಿಸಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಲೋಕಸಭಾ ಚುನಾವಣೆ ಘೋಷಣೆಗೆ ಕೆಲವೇ ವಾರಗಳು ಇರುವ ಹೊತ್ತಿನಲ್ಲಿ ಅತ್ಯಂತ ಮಹತ್ವದ ತೀರ್ಪನ್ನು ನೀಡಿರುವ ಸುಪ್ರೀಂ ಕೋರ್ಟ್‌, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಎಂದು ಸಾರಿದೆ. ಈ ತೀರ್ಪು ಕೇಂದ್ರ ಸರ್ಕಾರಕ್ಕೆ ಆಗಿರುವ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.

ರಾಜಕೀಯ ಪಕ್ಷಗಳಿಗೆ ಗೋಪ್ಯವಾಗಿ ದೇಣಿಗೆ ನೀಡಲು ಅವಕಾಶ ಕಲ್ಪಿಸುವ, 2018ರಲ್ಲಿ ಜಾರಿಗೆ ಬಂದ ಚುನಾವಣಾ ಬಾಂಡ್ ಯೋಜನೆಯು ಸಂವಿಧಾನ ದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ಮಾಹಿತಿ ಪಡೆದುಕೊಳ್ಳುವ ಹಕ್ಕಿಗೆ ಧಕ್ಕೆ ತರುವಂಥದ್ದು ಎಂದು ಕೋರ್ಟ್‌ ಹೇಳಿದೆ.

ಬಾಂಡ್‌ ಖರೀದಿಸಿದವರ ಹೆಸರು, ಬಾಂಡ್‌ನ ಮೌಲ್ಯ ಮತ್ತು ಬಾಂಡ್ ಪಡೆದವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಕೋರ್ಟ್‌ ಸೂಚಿಸಿದೆ. ಚುನಾವಣಾ ಬಾಂಡ್‌ ನೀಡುವ ಪ್ರಕ್ರಿಯೆಯು ತಕ್ಷಣದಿಂದಲೇ ಸ್ಥಗಿತಗೊಳ್ಳಬೇಕು ಎಂದು ಪೀಠವು ತಾಕೀತು ಮಾಡಿದೆ. ಸಂವಿಧಾನ ಪೀಠವು ಸರ್ವಾನುಮತದಿಂದ ಈ ತೀರ್ಪು ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT