ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಚುನಾವಣಾ ಬಾಂಡ್ ವ್ಯವಸ್ಥೆ ಸಲ್ಲ– ಇದು ಪ್ರಜಾತಂತ್ರಕ್ಕೆ ಅಪಾಯಕಾರಿ

Published 18 ಅಕ್ಟೋಬರ್ 2023, 20:55 IST
Last Updated 18 ಅಕ್ಟೋಬರ್ 2023, 20:55 IST
ಅಕ್ಷರ ಗಾತ್ರ

ಚುನಾವಣಾ ಬಾಂಡ್‌ ಯೋಜನೆಗೆ ಸಂಬಂಧಿಸಿದ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ವಿಚಾರಣೆ ನಡೆಸಲಿದೆ. ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ, ಗೋಪ್ಯವಾಗಿ ದೇಣಿಗೆ ನೀಡುವ ಈ ಅಪಾಯಕಾರಿ ವ್ಯವಸ್ಥೆಯ ವಿಚಾರದಲ್ಲಿ ತ್ವರಿತವಾಗಿ ತೀರ್ಮಾನವೊಂದು ಆಗಬಹುದು, ಚುನಾವಣಾ ಬಾಂಡ್ ವ್ಯವಸ್ಥೆಯು ಕೊನೆಗೊಳ್ಳಬಹುದು ಎಂಬ ಆಶಾಭಾವನೆಯು ಇದರಿಂದಾಗಿ ಮೂಡಿದೆ.

ಈ ವ್ಯವಸ್ಥೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳು ಐದು ವರ್ಷಗಳಿಗಿಂತ ಹೆಚ್ಚಿನ ಅವಧಿಯಿಂದ ಇತ್ಯರ್ಥವಾಗದೇ ಉಳಿದಿವೆ. ಈಗ ಐವರು ನ್ಯಾಯಮೂರ್ತಿಗಳು ಇರುವ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಅಕ್ಟೋಬರ್ 31ರಿಂದ ಈ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳುವ ನಿರೀಕ್ಷೆ ಇದೆ. ಪ್ರಾಥಮಿಕ ಹಂತದ ವಾದಗಳನ್ನು ಮಂಡಿಸಿ ಆಗಿರುವ ಕಾರಣ, ಅಂತಿಮ ವಿಚಾರಣೆ ನಡೆಯಲಿದೆ ಎಂದು ಕೋರ್ಟ್‌ ಹೇಳಿದೆ. ‘ನಾವು ಪ್ರಕರಣದ ಬಗ್ಗೆ ತೀರ್ಮಾನ ಕೊಡಲು ಇಲ್ಲಿದ್ದೇವೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಕಳೆದ ವಾರ ಹೇಳಿದ್ದಾರೆ.

ಅಂದರೆ, ಚುನಾವಣಾ ಬಾಂಡ್‌ಗಳ ವಿಚಾರವಾಗಿ ಅಂತಿಮ ತೀರ್ಮಾನವೊಂದು ಪ್ರಕಟವಾಗಬಹುದು. ಐದು ರಾಜ್ಯಗಳ ವಿಧಾನಸಭೆಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. 28ನೇ ಸುತ್ತಿನ ಚುನಾವಣಾ ಬಾಂಡ್‌ಗಳ ಮಾರಾಟವು ಈ ತಿಂಗಳು ಪೂರ್ಣಗೊಂಡಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೂ ಮೊದಲು ತೀರ್ಮಾನ ಆಗಬೇಕು ಎಂದು ಚುನಾವಣಾ ಬಾಂಡ್‌ ಯೋಜನೆ ಕುರಿತು ಅರ್ಜಿ ಸಲ್ಲಿಸಿರುವವರು ಮನವಿ ಮಾಡಿದ್ದಾರೆ. ಪ್ರಕರಣದ ಮಹತ್ವವನ್ನು ಗುರುತಿಸಿ, ವಿಚಾರಣೆಯಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಲು ನಿರ್ಧರಿಸಿರುವ ಸಿಜೆಐ ಕ್ರಮವು ಸ್ವಾಗತಾರ್ಹ.

ಚುನಾವಣಾ ಬಾಂಡ್ ಯೋಜನೆಯಲ್ಲಿ ಹಲವು ಸಮಸ್ಯೆಗಳಿವೆ. ಈ ಯೋಜನೆಗೆ ಸಂಬಂಧಿಸಿದ ಎರಡು ಪ್ರಮುಖ ವಿಚಾರಗಳ ಬಗ್ಗೆ ಕೋರ್ಟ್‌ ಗಮನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಈ ಎರಡು ವಿಚಾರಗಳಲ್ಲಿ ಒಂದನೆಯದು, ಅನಾಮಧೇಯವಾಗಿ ದೇಣಿಗೆ ನೀಡುವುದಕ್ಕೆ ಇರುವ ಅವಕಾಶ; ಎರಡನೆಯದು, ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಯ ಬಗ್ಗೆ ಮಾಹಿತಿ ಪಡೆಯಲು ಪ್ರಜೆಗಳು ಹೊಂದಿರುವ ಹಕ್ಕಿನ ಉಲ್ಲಂಘನೆಗೆ ಸಂಬಂಧಿಸಿದೆ. ಈ ಎರಡು ವಿಷಯಗಳು ಸಂವಿಧಾನದ 14, 19 ಮತ್ತು 21ನೇ ವಿಧಿಗಳ ಉಲ್ಲಂಘನೆಗೆ ಸಂಬಂಧಿಸಿವೆ. ಯೋಜನೆಯ ಆರಂಭದಿಂದಲೂ ಇದರ ಬಗ್ಗೆ ಹಲವು ಪ್ರಶ್ನೆಗಳು ಇವೆ. ಈ ಯೋಜನೆಯು ರಾಜಕೀಯ ಪಕ್ಷಗಳಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ದೇಣಿಗೆ ಲಭ್ಯವಾಗುವಂತೆ ಮಾಡುತ್ತದೆ. ಆದರೆ, ಇಲ್ಲಿ ದೇಣಿಗೆ ನೀಡುತ್ತಿರುವ ವ್ಯಕ್ತಿ ಯಾರೆಂಬುದು ಗೊತ್ತಾಗುವುದೇ ಇಲ್ಲ. ಅನಾಮಧೇಯರಾಗಿ ಇದ್ದುಕೊಂಡು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದನ್ನು ಕಾನೂನು
ಬದ್ಧಗೊಳಿಸುವುದು ಭ್ರಷ್ಟಾಚಾರಕ್ಕೆ ನೆರವು ಒದಗಿಸುವುದಕ್ಕೆ ಹಾಗೂ ಭ್ರಷ್ಟಾಚಾರವನ್ನು ಸಕ್ರಮ
ಗೊಳಿಸುವುದಕ್ಕೆ ಸಮ. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುತ್ತಿರುವವರು ಯಾರು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಇರಬೇಕು. ಏಕೆಂದರೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಮೂಲಕ, ಆ ಪಕ್ಷಗಳ ನೀತಿ–ನಿಲುವುಗಳ ಮೇಲೆ ಪ್ರಭಾವ ಬೀರುವ ಅವಕಾಶವೂ ಇರುತ್ತದೆ. ಚುನಾವಣಾ ಬಾಂಡ್‌ಗಳ ಮೂಲಕ ನೀಡಲಾಗಿರುವ ದೇಣಿಗೆಗಳಲ್ಲಿ ಶೇಕಡ 95ರಷ್ಟಕ್ಕಿಂತ ಹೆಚ್ಚಿನವು ₹1 ಕೋಟಿ ಹಾಗೂ ಅದಕ್ಕೂ ಹೆಚ್ಚಿನ ಮೊತ್ತದ್ದಾಗಿವೆ. ಅಂದರೆ ಈ ಮೊತ್ತವನ್ನು ಪಕ್ಷಗಳಿಗೆ ದೇಣಿಗೆಯಾಗಿ ನೀಡಿದ್ದು ಕಾರ್ಪೊರೇಟ್‌ ಸಂಸ್ಥೆಗಳಾಗಿರಬಹುದು ಅಥವಾ ಶ್ರೀಮಂತ ವ್ಯಕ್ತಿ
ಗಳಾಗಿರಬಹುದು. ಬಾಂಡ್‌ಗಳು ಹಣದ ಅಕ್ರಮ ವರ್ಗಾವಣೆಗೆ ನೆರವಾಗಬಹುದು ಎಂಬ ಕಳವಳವೂ ವ್ಯಕ್ತವಾಗಿದೆ. ಆದರೆ ಈ ಕಳವಳಕ್ಕೆ ಆಧಾರವಿಲ್ಲ ಎಂದು ಸರ್ಕಾರ ಹೇಳಿದೆ. ಹಣದ ಅಕ್ರಮ ವರ್ಗಾ
ವಣೆಯನ್ನು ತಡೆಯುವುದೇ ಈ ಯೋಜನೆಯ ಉದ್ದೇಶ ಎಂದು ಅದು ಹೇಳಿಕೊಂಡಿದೆ.

ಬಾಂಡ್‌ ಮೂಲಕ ಆಗಿರುವ ದೇಣಿಗೆಗಳಲ್ಲಿ ಅತಿಹೆಚ್ಚಿನ ಪಾಲು ಹೋಗಿರುವುದು ಬಿಜೆಪಿಗೆ. ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯ ವಿಚಾರದಲ್ಲಿ ಆಡಳಿತಾರೂಢರಿಗೆ ಹೆಚ್ಚಿನ ಅನುಕೂಲಗಳು ಇರುತ್ತವೆ ಎಂಬುದು ನಿಜ. ಆದರೆ ಆ ಅನುಕೂಲವನ್ನು ಸಾಂಸ್ಥಿಕವಾಗಿಸಬಾರದು. ಈ ಯೋಜನೆಯಲ್ಲಿ ದೇಣಿಗೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮೂಲಕ ನೀಡಲಾಗುವ ಕಾರಣ, ದೇಣಿಗೆ ನೀಡಿದವರ ವಿವರಗಳನ್ನು ಪಡೆಯುವ ಅವಕಾಶ ಸರ್ಕಾರಕ್ಕೆ ಇರುತ್ತದೆ. ಇದನ್ನು ಬಳಸಿ ಸರ್ಕಾರವು ವಿರೋಧ ಪಕ್ಷಗಳಿಗೆ ದೇಣಿಗೆ ಸಿಗದಂತೆ ಮಾಡಬಹುದು. ಈ ಎಲ್ಲ ಕಾರಣಗಳಿಂದಾಗಿ ಚುನಾವಣಾ ಬಾಂಡ್‌ ವ್ಯವಸ್ಥೆಯು ರಾಜಕೀಯ ಪಕ್ಷಗಳ ನಡುವೆ ಅಸಮತೋಲನ ಸೃಷ್ಟಿಸುತ್ತದೆ. ಅಷ್ಟೇಅಲ್ಲ, ಇದು ನಮ್ಮ ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT