ಜಮ್ಮು: ಜಮ್ಮು–ಕಾಶ್ಮೀರದ ಉಧಮ್‌ಪುರ ಜಿಲ್ಲೆಯಲ್ಲಿ ಭದ್ರತಾ ತಂಡ ಆರಂಭಿಸಿದ್ದ ಕಾರ್ಯಾಚರಣೆ ಎರಡನೇ ದಿನವಾದ ಬುಧವಾರವೂ ಮುಂದುವರಿದಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿತ್ತು.
ಉಗ್ರರ ಚಲನವಲನಗಳ ಬಗ್ಗೆ ಮಾಹಿತಿ ದೊರೆತ ಕಾರಣ ಪೊಲೀಸ್, ಸೇನೆ ಮತ್ತು ಕೇಂದ್ರಿಯ ಮೀಸಲು ಪೊಲೀಸ್ ಪಡೆಯು ಬಸಂತ್‌ಘರ್ ಪ್ರದೇಶದಲ್ಲಿ ಮಂಗಳವಾರ ಬೃಹತ್ ಜಂಟಿ ಕಾರ್ಯಾಚರಣೆ ಆರಂಭಿಸಿತ್ತು.
‘ಭಯೋತ್ಪಾದಕರು ಅರಣ್ಯದಲ್ಲಿ ಅವಿತಿರುವ ಸಾಧ್ಯತೆಗಳಿದೆ. ಹಾಗಾಗಿ ಹೆಚ್ಚುವರಿ ಪಡೆಗಳನ್ನು ನಿಯೋಜನೆಗೊಳಿಸಿ ಅರಣ್ಯವನ್ನು ಸುತ್ತುವರಿಯಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ರಜೌರಿ ಜಿಲ್ಲೆಯ ದಿಯಾರ್ ಗಲಾ ಅರಣ್ಯದಲ್ಲಿಯೂ ಇಬ್ಬರು ಭಯೋತ್ಪಾದಕರ ಚಲನವಲನಗಳ ಮಾಹಿತಿ ದೊರೆತ ಕಾರಣ ಕಾರ್ಯಾಚರಣೆ ನಡೆಸಲಾಗಿದ್ದು, ಒಬ್ಬ ಭಯೋತ್ಪಾದಕ ಗಾಯಗೊಂಡಿದ್ದಾನೆ. ಕಾರ್ಯಾಚರಣೆ ಮುಂದುವರಿದಿದೆ’ ಎಂದು ಮಾಹಿತಿ ನೀಡಿದ್ದಾರೆ.