ನವದೆಹಲಿ: ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಐದನೇ ಸಾಲಿನಲ್ಲಿ ಆಸನ ಕಲ್ಪಿಸಿದ್ದಕ್ಕೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಸಣ್ಣತನ ಹಾಗೂ ಪ್ರಜಾಪ್ರಭುತ್ವ ಸಂಪ್ರದಾಯಗಳ ಬಗ್ಗೆ ಇರುವ ಗೌರವದ ಕೊರತೆಯನ್ನು ಸೂಚಿಸುತ್ತದೆ ಎಂದು ಕಿಡಿಕಾರಿದೆ.
‘ಪ್ರಧಾನಿ ನರೇಂದ್ರ ಮೋದಿ ಒಬ್ಬ ಕ್ಷುಲಕ ಮನಸ್ಥಿತಿ ಇರುವ ವ್ಯಕ್ತಿ. ಇದಕ್ಕೆ ಅವರು ಪದೇ ಪದೇ ಸಾಕ್ಷಿ ನೀಡುತ್ತಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಹೇಳಿದ್ದಾರೆ.
‘ಕ್ಷುಲಕ ಮನಸ್ಥಿತಿ ಇರುವವರಿಂದ ದೊಡ್ಡದ್ದನ್ನು ಬಯಸುವುದು ತಪ್ಪು. ಸ್ವಾತಂತ್ರ್ಯ ದಿನಾಚರಣೆ ವೇಳೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಐದನೇ ಸಾಲಿನಲ್ಲಿ ಕೂರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಹತಾಶೆಯನ್ನು ಹೊರಗೆ ಹಾಕಿದ್ದಾರೆ. ಆದರೆ ಇದ್ಯಾವುದೂ ರಾಹುಲ್ ಗಾಂಧಿ ಅವರ ಮೇಲೆ ಪರಿಣಾಮ ಬೀರದು. ಅವರು ಈ ಹಿಂದಿನಂತೆ ಜನರ ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದಾರೆ’ ಎಂದು ಅವರು ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೊ ಪೋಸ್ಟ್‌ನಲ್ಲಿ ಹೇಳಿದ್ದಾರೆ.
‘ನಿಮಗೆ ಮತ್ತು ನಿಮ್ಮ ಸರ್ಕಾರಕ್ಕೆ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ವಿರೋಧ ಪಕ್ಷದ ನಾಯಕನ ಬಗ್ಗೆ ಯಾವುದೇ ಗೌರವವಿಲ್ಲ ಎಂಬುದನ್ನು ಇದು ತೋರಿಸುತ್ತದೆ. ವಿರೋಧ ಪಕ್ಷದ ನಾಯಕನಿಗೆ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನ ಇದೆ. ಸಚಿವರೆಲ್ಲರೂ ಮೊದಲ ಸಾಲಿನಲ್ಲಿದ್ದರು. ರಾಹುಲ್ ಗಾಂಧಿ ಮಾತ್ರವಲ್ಲ, ಮಲ್ಲಿಕಾರ್ಜುನ ಖರ್ಗೆಯವರಿಗೂ 5ನೇ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು’ ಎಂದು ಅವರು ಹೇಳಿದ್ದಾರೆ.
‘ಒಲಿಂಪಿಯನ್‌ಗಳನ್ನು ಗೌರವಿಸಲು ಈ ವ್ಯವಸ್ಥೆ ಮಾಡಲಾಗಿದೆ ಎನ್ನುವ ಮೂರ್ಖ ಹೇಳಿಕೆ ರಕ್ಷಣಾ ಸಚಿವಾಲಯದಿಂದ ಬಂದಿದೆ. ಅವರನ್ನು ಗೌರವಿಸಲೇಬೇಕು. ಅವರ ಜೊತೆ ವಿನೇಶ್ ಫೋಗಟ್ ಅವರನ್ನೂ ಗೌರವಿಸಬೇಕಿತ್ತು. ಆದರೆ ಅಮಿತ್ ಶಾ, ಜೆಪಿ ನಡ್ಡಾ, ಎಸ್ ಜೈಶಂಕರ್ ಮತ್ತು ನಿರ್ಮಲಾ ಸೀತಾರಾಮನ್ ಅವರಿಗೆ ಕ್ರೀಡಾಪಟುಗಳನ್ನು ಗೌರವಿಸಬೇಕು ಎಂದು ಅನಿಸಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
‘ರಾಹುಲ್ ಗಾಂಧಿ ಐದನೇ ಸಾಲಿನಲ್ಲಿ ಕುಳಿತರೂ ಅಥವಾ ಐವತ್ತನೇ ಸಾಲಿನಲ್ಲಿ ಕುಳಿತುಕೊಂಡರೂ, ಅವರು ಜನನಾಯಕರಾಗಿ ಉಳಿಯುತ್ತಾರೆ. ಆದರೆ ನೀವು ಇಂತಹ ಕೊಳಕು ಕೃತ್ಯಗಳನ್ನು ಯಾವಾಗ ನಿಲ್ಲಿಸುತ್ತೀರಿ’ ಎಂದು ಪ್ರಶ್ನೆ ಮಾಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತೀಯ ಅಥ್ಲೀಟ್‌ಗಳು ಕುಳಿತಿದ್ದ ನಂತರದ ಸಾಲಿನಲ್ಲಿ ರಾಹುಲ್ ಗಾಂಧಿ ಆಸೀನರಾಗಿದ್ದು ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.