‘ರಾಜ್ಯದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದರೂ ನಿಯಂತ್ರಣದಲ್ಲಿದೆ. ಇಂದು (ಭಾನುವಾರ) ಯಾವುದೇ ಹೊಸ ಹಿಂಸಾಚಾರ ಘಟನೆಗಳು ವರದಿಯಾಗಿಲ್ಲ. ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಭದ್ರತಾ ಪಡೆಗಳ ಸಮನ್ವಯದೊಂದಿಗೆ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನಧಿಕೃತ ಡ್ರೋನ್ ಹೊಡೆದುರುಳಿಸುವ ಉದ್ದೇಶದಿಂದ ಅಸ್ಸಾಂ ರೈಫಲ್ಸ್ ಇಂಫಾಲ್ ಕಣಿವೆ ಪ್ರದೇಶಗಳಲ್ಲಿ ಆ್ಯಂಟಿ ಡ್ರೋನ್ ಸಿಸ್ಟಮ್ ಅನ್ನು ನಿಯೋಜಿಸಿದೆ ಎಂದು ಅವರು ಹೇಳಿದ್ದಾರೆ.
ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ನಡೆದ ಹಿಂಸಾಚಾರದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಬಿಷ್ಣುಪುರ ಜಿಲ್ಲೆಯಲ್ಲಿ ಉಗ್ರರು ನಡೆಸಿದ ರಾಕೆಟ್ ದಾಳಿಗೆ ಭದ್ರತಾ ಪಡೆಗಳು ತಿರುಗೇಟು ನೀಡಿದ್ದು, ಚುರ್‌ಚಂದಪುರ ಜಿಲ್ಲೆಯಲ್ಲಿ ಉಗ್ರರಿಗೆ ಸೇರಿದ 3 ಬಂಕರ್‌ಗಳನ್ನು ಸೇನಾಪಡೆಗಳು ಧ್ವಂಸಗೊಳಿಸಿವೆ.
ಹಿಂಸಾಚಾರ ಬೆನ್ನಲ್ಲೇ ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.